ಕಳೆದ ಕೆಲವು ವರ್ಷಗಳಿಂದ ಭಾರತೀಯ ಮನೋರಂಜನಾ ಉದ್ಯಮ ಹಲವು ಏಳುಬೀಳುಗಳಿಂದ ಕೂಡಿತ್ತಾದರೂ, ಪ್ರೇಕ್ಷಕರನ್ನು ತಲುಪುವಲ್ಲಿ ಕೆಲವು ಸಿನಿಮಾಗಳು ಯಶಸ್ವಿಯಾಗಿವೆ. ಪ್ರಸ್ತುತ ಕಾಲಘಟ್ಟದಲ್ಲಿ ಸಿನಿಮಾಪ್ರಿಯರ ಅಭಿರುಚಿ ಬದಲಾಗುತ್ತಿದೆ. ಹೊಸದನ್ನು, ಉತ್ತಮ ಕಥೆಯನ್ನು ಪ್ರೇಕ್ಷಕರು ಬಯಸುತ್ತಾರೆಂಬ ವಿಚಾರ ಚಿತ್ರರಂಗದವರಿಗೆ ಮನದಟ್ಟಾಗಿದೆ. ಹಾಗಂತ ಮೇಕಿಂಗ್ ವಿಚಾರವನ್ನು ಮರೆಯುವಂತಿಲ್ಲ. ಉತ್ತಮ ಕಥಾಹಂದರವುಳ್ಳ ಚಿತ್ರಗಳನ್ನು ಪ್ರೇಕ್ಷಕರಿಗೆ ತಲುಪಿಸಲು ಭಾರತೀಯ ಚಿತ್ರರಂಗ ಪೂರ್ಣ ಪ್ರಮಾಣದಲ್ಲಿ ಶ್ರಮಿಸುತ್ತಿದೆ. ಈ ವರ್ಷ ಯಾವೆಲ್ಲಾ ಸಿನಿಮಾ ಬಿಡುಗಡೆ ಆಗಲಿದೆ ಅನ್ನೋದನ್ನು ನೋಡೋಣ.
ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) 2023 ಸಾಲಿನ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿತ್ತು. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ 'ಕಬ್ಜ' ಕೂಡ ಇದೆ. ಕೆಜಿಎಫ್ 2, ಕಾಂತಾರ ಸಿನಿಮಾ ಬಳಿಕ ಇಡೀ ಭಾರತೀಯ ಚಿತ್ರರಂಗದ ಕಣ್ಣು ಸ್ಯಾಂಡಲ್ವುಡ್ ಮೇಲೆ ನೆಟ್ಟಿದ್ದು, ಅತ್ಯುತ್ತಮ ಚಿತ್ರಗಳನ್ನು ಕೊಡಲು ಕನ್ನಡ ಚಿತ್ರರಂಗ ಸಜ್ಜಾಗಿದೆ. ಈ ಪಟ್ಟಿಯಲ್ಲಿದ್ದ ಪಠಾಣ್ (250 ಕೋಟಿ ರೂ. ಬಂಡವಾಳ) ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದ್ದು, ಉಳಿದ ಸಿನಿಮಾಗಳು ಬಿಡುಗಡೆಗೆ ತಯಾರಿ ನಡೆಸಿವೆ.
ಕಬ್ಜ ಸಿನಿಮಾ: ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಅಭಿನಯ ಚಕ್ರವರ್ತಿ ಸುದೀಪ್ ನಟನೆಯ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕಬ್ಜ. ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ 1960-1984ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ಹೈ ವೋಲ್ಟೇಜ್ ಚಿತ್ರವಾಗಿರೋ ಕಬ್ಜ, ಆರ್.ಚಂದ್ರು ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ. ಅದ್ಧೂರಿ ಮೆಕಿಂಗ್ ಇರುವ ಕಬ್ಜ ಬಿಡುಗಡೆಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.
ಕಿಸಿ ಕಾ ಭಾಯ್ ಕಿಸಿ ಕಿ ಜಾನ್:ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾ ಈ ವರ್ಷದ ಈದ್ (12 ಏಪ್ರಿಲ್ 2023) ಸಂದರ್ಭದಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವನ್ನು 90 ಕೋಟಿ ರೂಪಾಯಿಗಳಲ್ಲಿ ನಿರ್ಮಾಣ ಮಾಡಲಾಗಿದೆ.
ಜವಾನ್: ಪಠಾಣ್ ಯಶಸ್ಸಿನ ಖುಷಿಯಲ್ಲಿರುವ ಶಾರುಖ್ ಖಾನ್ ಅವರ ಮುಂದಿನ ಚಿತ್ರ ಜವಾನ್. ಮೊದಲ ಬಾರಿಗೆ ಶಾರುಖ್ ಖಾನ್ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಅಟ್ಲೀ ಅವರೊಂದಿಗೆ ಕೆಲಸ ಮಾಡುತ್ತಿದ್ದಾರೆ. 200 ಕೋಟಿ ರೂ. ವೆಚ್ಚದ ಈ ಚಿತ್ರ ಇದೇ ಜೂನ್ 2ರಂದು ಬಿಡುಗಡೆಯಾಗಲಿದೆ.
ಡುಂಕಿ: ಶಾರುಖ್ ಖಾನ್ ಅವರ ಮುಂದಿನ ಚಿತ್ರ 2023ರ ಕೊನೆಯಲ್ಲಿ ಬಿಡುಗಡೆ ಆಗಲಿದೆ. ರಾಜಕುಮಾರ್ ಹಿರಾನಿ ನಿರ್ದೇಶನದ ಈ ಸಿನಿಮಾದ ಬಜೆಟ್ 100 ಕೋಟಿ ರೂಪಾಯಿ ಎಂದು ಹೇಳಲಾಗಿದೆ.
ಬಡೇ ಮಿಯಾನ್ ಚೋಟೆ ಮಿಯಾನ್:ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್, ಜಾನ್ವಿ ಕಪೂರ್ ನಟನೆಯ ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರವನ್ನು ಅಲಿ ಅಬ್ಬಾಸ್ ಜಾಫರ್ ನಿರ್ದೇಶನ ಮಾಡುತ್ತಿದ್ದಾರೆ. 350 ಕೋಟಿ ರೂಪಾಯಿ ವೆಚ್ಚದ ಈ ಚಿತ್ರವು ಡಿಸೆಂಬರ್ 22ರಂದು ಬಿಡುಗಡೆಯಾಗಲಿದೆ. ಈ ಚಿತ್ರ ಶಾರುಖ್ ಅಭಿನಯದ ಡುಂಕಿಗೆ ಪೈಪೋಟಿ ನೀಡಲಿದೆ.
ಆದಿಪುರುಷ್: ಸೌತ್ ಸೂಪರ್ ಸ್ಟಾರ್ ಪ್ರಭಾಸ್, ಬಾಲಿವುಡ್ ನಟ ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮತ್ತು ಕೃತಿ ಸನೂನ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ 'ಆದಿಪುರುಷ್' ಕೂಡ ಈ ವರ್ಷ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಓಂ ರಾವುತ್ ನಿರ್ದೇಶಿಸಿದ್ದಾರೆ. ಚಿತ್ರದ ಬಜೆಟ್ 650 ಕೋಟಿ ರೂ. ಇದ್ದು ಚಿತ್ರದ ಕೆಲಸಗಳು ಇನ್ನೂ ನಡೆಯುತ್ತಿವೆ. ಚಿತ್ರ ಜೂನ್ 14 ರಂದು ಬಿಡುಗಡೆಯಾಗಲಿದೆ.
ಅನಿಮಲ್: ರಣ್ಬೀರ್ ಕಪೂರ್ ಅಭಿನಯದ 'ಅನಿಮಲ್' ಆಗಸ್ಟ್ 11ರಂದು ಬಿಡುಗಡೆಯಾಗಲಿದೆ. 140 ಕೋಟಿ ರೂಪಾಯಿ ಬಜೆಟ್‌ನಲ್ಲಿ ಚಿತ್ರ ತಯಾರಾಗುತ್ತಿದೆ. ಅನಿಲ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರಗಳಲ್ಲಿದ್ದಾರೆ. ಚಿತ್ರವನ್ನು 'ಕಬೀರ್ ಸಿಂಗ್' ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸುತ್ತಿದ್ದಾರೆ.