ಹೈದರಾಬಾದ್: ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿರುವ ಚಿತ್ರಗಳು ಟ್ವಿಟರ್ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೆ, ಅಮಿತಾಬ್ ಬಚ್ಚನ್ ಸಾಮಾಜಿಕ ಮಾಧ್ಯಮದಲ್ಲಿ ಕುತೂಹಲಕಾರಿ, ನಿಗೂಢವಾಗಿರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಅಭಿಮಾನಿಗಳ ಕಾಲೆಳೆದಿದ್ದಾರೆ. ಅಮಿತಾಭ್ ಬಚ್ಚನ್ ತಮ್ಮ ಇನ್ಸ್ಟಾಗ್ರಾಂನಲ್ಲಿ Arrested 'ಬಂಧಿಸಲಾಗಿದೆ' ಎಂದು ಬರೆದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಮುಂಬೈನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಅಭಿಮಾನಿಯೊಬ್ಬರ ಬೈಕ್ ಏರಿ ಸ್ಕ್ರೀನ್ ಐಕಾನ್ ಅಮಿತಾಭ್ ಬಚ್ಚನ್ ಇತ್ತೀಚೆಗೆ ಸುದ್ದಿಯಾಗಿದ್ದರು. ಅದೇ ಫೋಟೋವನ್ನು ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಇನ್ಸ್ಟಾಗ್ರಾಂನಲ್ಲೂ ಹಂಚಿಕೊಂಡಿದ್ದರು. ಆದರೆ, ಆ ಫೋಟೋ ಫೇಮ್ ತರುವ ಬದಲು ಸಮಸ್ಯೆ ತಂದೊಡ್ಡಿತ್ತು. ಬಿಗ್ ಬಿ ತಮ್ಮ ಬೈಕ್ ರೈಡ್ ಚಿತ್ರಗಳನ್ನು ಹಂಚಿಕೊಂಡ ಕೆಲವೇ ಹೊತ್ತಲ್ಲಿ ನೆಟಿಜನ್‌ಗಳು, ಬೈಕ್ ರೈಡರ್ ಹಾಗೂ ಬಿಗ್ ಬಿ ಹೆಲ್ಮೆಟ್ ಧರಿಸಿಲ್ಲ ಎಂದು ಆರೋಪಿಸಿ ಇದನ್ನು ಮುಂಬೈ ಪೊಲೀಸರು ಗಮನಕ್ಕೆ ತರುವಲ್ಲಿ ವರೆಗೆ ಕಮೆಂಟ್ಗಳನ್ನು ಮಾಡಿದ್ದರು. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಕೂಡ ಆಗಿತ್ತು.
ಇದಾದ ಬೆನ್ನಲ್ಲೇ ಶುಕ್ರವಾರ, ಬಿಗ್ ಬಿ ಅವರು ಟ್ರಾಫಿಕ್ ಪೊಲೀಸ್ ವ್ಯಾನ್ ಬಳಿ ನಿಂತಿರುವ ಚಿತ್ರವನ್ನು Instagram ನಲ್ಲಿ ಹಂಚಿಕೊಂಡಿದ್ದು, Arrested ಎಂದು ಕ್ಯಾಪ್ಷನ್ ಕೂಡ ಬರೆದುಕೊಂಡಿದ್ದಾರೆ. ಫೋಟೋದಲ್ಲಿ ಅಮಿತಾಭ್ ಬಚ್ಚನ್ ಟರ್ಟಲ್ ನೆಕ್ ಟಿ - ಶರ್ಟ್ ಮತ್ತು ಕಪ್ಪು ಪ್ಯಾಂಟ್‌ನೊಂದಿಗೆ ಚೆಕರ್ಡ್ ಶರ್ಟ್ ಧರಿಸಿ, ಬಿಗ್ ಬಿ ಚಿತ್ರದಲ್ಲಿ ಎಂದಿನಂತೆ ಆಕರ್ಷಕವಾಗಿ ಕಾಣುತ್ತಾರೆ. ಪೊಲೀಸ್ ವ್ಯಾನ್‌ನ ಮೇಲೆ ಸ್ವಲ್ಪ ವಾಲಿ ನಿಂತು ಪೋಸ್ ನೀಡುತ್ತಿದ್ದಾರೆ.