ಭೋಪಾಲ್: ಹುಲಿಗಳಿದ್ದ ಬೋನಿಗೆ ಕೆಲ ಕಿಡಿಗೇಡಿಗಳು ಕಲ್ಲು ಎಸೆದಿದ್ದ ವಿಡಿಯೋವನ್ನು ಬಾಲಿವುಡ್ ನಟಿ ರವೀನಾ ಟಂಡನ್ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ. ವಿಡಿಯೋ ಸಹಿತ ಮಾಡಿದ್ದ ಟ್ವೀಟ್ ಆಧರಿಸಿ ಮಧ್ಯಪ್ರದೇಶ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಈ ಉದ್ಯಾನವು ಭೋಪಾಲ್ ಸರೋವರದ ದಡದಲ್ಲಿದೆ.
ಹುಲಿಗಳಿರುವ ಬೋನಿಗೆ ಕಿಡಿಗೇಡಿಗಳು ಕಲ್ಲು ಎಸೆದಿದ್ದಾರೆ. ಕಲ್ಲು ಹೊಡೆಯಬೇಡಿ ಎಂದು ಬುದ್ಧಿ ಹೇಳಿದರೂ ಅದನ್ನು ಲೆಕ್ಕಿಸದೇ ತಮ್ಮ ಉದ್ಧಟತನ ಮುಂದುವರಿಸಿದ್ದಾರೆ. ಬೋನ್ ಅಲ್ಲಾಡಿಸಿ ಚೇಷ್ಟೆ ಮಾಡಿದ್ದಾರೆ. ಹುಲಿಗಳಿಗೆ ಯಾವುದೇ ಭದ್ರತೆ ಇಲ್ಲ ಎಂದು ನಟಿ ರವೀನಾ ಟಂಡನ್ ಸೋಮವಾರ ಟ್ವೀಟ್ ಮಾಡಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಉದ್ಯಾನದ ಆಡಳಿತ ಮಂಡಳಿ, ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದೆ. ಅಂತಹ ಕೃತ್ಯ ಎಸಗಿದವರು ವನ್ಯಜೀವಿಗಳ ರಕ್ಷಣಾ ಕಾಯ್ದೆಯಡಿ ಶಿಕ್ಷೆಗೆ ಅರ್ಹರು ಎಂದು ಹೇಳಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಪ್ರಾಣಿಪಕ್ಷಿಗಳಿಗೆ ದೈಹಿಕ ಹಾನಿಯನ್ನುಂಟುಮಾಡುವ ಯಾವುದೇ ರೀತಿಯ ಕ್ರಮದ ವಿರುದ್ಧ ವನ್ ವಿಹಾರ್ ರಾಷ್ಟ್ರೀಯ ಉದ್ಯಾನವನವು ಶೂನ್ಯ ಸಹಿಷ್ಣುತೆಯ ನೀತಿ ಅನುಸರಿಸುತ್ತದೆ ಎಂದು ಹೇಳಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಶಿಕ್ಷಾರ್ಹವಾಗಿರುವ ಯಾವುದೇ ಚಟುವಟಿಕೆಗಳನ್ನು ಮಾಡದಂತೆ ಸಾರ್ವಜನಿಕರನ್ನು ನಾವು ಒತ್ತಾಯಿಸುತ್ತೇವೆ ಎಂದು ತಿಳಿಸಿದೆ.
ಉದ್ಯಾನವನದ ನಿರ್ದೇಶಕಿ ಪದ್ಮಪ್ರಿಯಾ ಬಾಲಕೃಷ್ಣನ್ ಮಾತನಾಡಿ, ರವೀನಾ ಟಂಡನ್ ಅವರು ಹಂಚಿಕೊಂಡಿರುವ ವಿಡಿಯೋದಲ್ಲಿ ನಿಜವಾಗಿ ಯಾರು ಕಲ್ಲು ಎಸೆಯುತ್ತಿದ್ದಾರೆ ಎಂಬುದು ಗೊತ್ತಾಗಿಲ್ಲ. ಆದರೆ, ಯಾರೋ ಹಿಂದಿನಿಂದ ಏಕೆ ಕಲ್ಲು ಎಸೆಯುತ್ತಿದ್ದೀರಿ? ಕೂಗುತ್ತಿರುವುದು ಕೇಳಿಸುತ್ತಿದೆ. ಇಬ್ಬರು ಪುರುಷರು ಅನುಚಿತವಾಗಿ ವರ್ತಿಸಿದ್ದಾರೆ. ನಾವು ಅವರ ಚಿತ್ರಗಳನ್ನು ಉದ್ಯಾನವನದ ಗೇಟ್‌ಗಳಲ್ಲಿ ಇರಿಸಿದ್ದೇವೆ ಮತ್ತು ಅವರ ಪ್ರವೇಶವನ್ನು ನಿಷೇಧಿಸಿದ್ದೇವೆ ಎಂದು ಹೇಳಿದರು.
ಇದನ್ನೂ ಓದಿ:'ದೃಶ್ಯಂ 2' ಭರ್ಜರಿ ಕಲೆಕ್ಷನ್.. ಲಾಲ್, ವೆಂಕಿಗೆ ಸಿಗದ ಅವಕಾಶ ದೇವ್ಗನ್ಗೆ!
ಇನ್ನೂ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಅವರನ್ನು ಗುರುತಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೇ, ನಿಗಾ ಇಡುವಲ್ಲಿ ನಿರ್ಲಕ್ಷ್ಯ ತೋರಿದ್ದಕ್ಕಾಗಿ ನಾವು ನಮ್ಮ ಸಿಬ್ಬಂದಿಯಿಂದ ವಿವರಣೆಯನ್ನು ಕೇಳುತ್ತಿದ್ದೇವೆ. ಅಂತಹ ಘಟನೆಗಳನ್ನು ತಡೆಯಲು ಉದ್ಯಾನವನದಾದ್ಯಂತ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.