ಅಜಯ್ ದೇವ್ಗನ್ ಅಭಿನಯದ ಭೋಲಾ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ತಮ್ಮ ಓಟ ಮುಂದುವರಿಸಿದೆ. ಮೊದಲ ವಾರದಲ್ಲೇ 59.68 ಕೋಟಿ ಗಳಿಸಿದ್ದ ಭೋಲಾ ಚಿತ್ರ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ವರದಿಗಳ ಪ್ರಕಾರ, ಚಿತ್ರವು ಶುಕ್ರವಾರ 3.60 ಕೋಟಿ ರೂ. ಮತ್ತು ಶನಿವಾರ 4.25 ಕೋಟಿ ರೂ. ಗಳಿಸಿದೆ. ಈ ಮೂಲಕ ಮೊದಲ ಹತ್ತು ದಿನಗಳಲ್ಲಿ ಒಟ್ಟು 67.53 ಕೋಟಿ ರೂ ಕಲೆಕ್ಷನ್ ಮಾಡಿದೆ. ಲೋಕೇಶ್ ಕನಗರಾಜ್ ನಿರ್ದೇಶನದ ತಮಿಳಿನ ಹಿಟ್ ಕೈತಿ ಚಿತ್ರದ ರಿಮೇಕ್ ಆಗಿರುವ ಭೋಲಾ ಮಾರ್ಚ್ 30ರಂದು 3D ಮತ್ತು 2Dನಲ್ಲಿ ತೆರೆಕಂಡು ಉತ್ತಮ ಪ್ರದರ್ಶನ ಮುಂದುವರಿಸಿದೆ.
ಭೋಲಾ ಸಿನಿಮಾ 2023ರಲ್ಲಿ ಭರ್ಜರಿ ಓಪನಿಂಗ್ ಪಡೆದಿರುವ ಮೂರನೇ ಬಾಲಿವುಡ್ ಸಿನಿಮಾ. ಮೊದಲ ದಿನದಲ್ಲಿ 57 ಕೋಟಿ ರೂ. ಗಳಿಸಿದ್ದ ಪಠಾಣ್, 15.73 ಕೋಟಿ ರೂ. ಗಳಿಸಿದ ತು ಜೂಟಿ ಮೈ ಮಕ್ಕರ್ ಬಳಿಕ ಭೋಲಾ ಉತ್ತಮ ಕಲೆಕ್ಷನ್ ಮಾಡುತ್ತಿದೆ.
ಗುರುವಾರ (ಮಾರ್ಚ್ 30) ಚಿತ್ರವು 11.2 ಕೋಟಿ ರೂ. ಗಳಿಸಿತು. ಯು ಮಿ ಔರ್ ಹಮ್ (2008), ಶಿವಾಯ್ (2016) ಮತ್ತು ರನ್ ವೇ 34 (2022)ರ ನಂತರ 'ಭೋಲಾ' ಅಜಯ್ ದೇವ್ಗನ್ ನಿರ್ದೇಶನದ ನಾಲ್ಕನೇ ಚಿತ್ರ. ಆ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಲಿಲ್ಲ. 'ಭೋಲಾ' ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಸಹ, ಅಜಯ್ ಅವರ ಹಿಂದಿನ ಚಿತ್ರಕ್ಕೆ ಹೋಲಿಸಿದರೆ ಕೊಂಚ ಕಡಿಮೆ ಎನ್ನಬಹುದು. ಅವರ ಕೊನೆಯ ದೃಶ್ಯಂ 2 ಚಿತ್ರ ವಿಶ್ವದಾದ್ಯಂತ 340 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಯಶಸ್ಸು ಕಂಡಿತ್ತು. ಆದಾಗ್ಯೂ, ಏಪ್ರಿಲ್ 21 ರಂದು ಸಲ್ಮಾನ್ ಖಾನ್ ಅವರ ಬಹು ನಿರೀಕ್ಷಿತ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಬಿಡುಗಡೆಯಾಗುವವರೆಗೂ ಭೋಲಾ ಕಲೆಕ್ಷನ್ಗೆ ಯಾವುದೇ ಅಡ್ಡಿಯಿಲ್ಲ.