ಬಾಲಿವುಡ್ ನಟ ಅಜಯ್ ದೇವಗನ್ ಅವರ ಬಹುನಿರೀಕ್ಷಿತ 'ಭೋಲಾ' ಸಿನಿಮಾ ಒಂದು ವಾರಕ್ಕೂ ಹೆಚ್ಚು ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಳ್ಳುತ್ತಿದೆ. ಹಿಂದಿ ಮಾರುಕಟ್ಟೆಯಲ್ಲಿ ಹೆಚ್ಚು ಪೈಪೋಟಿ ಇಲ್ಲದಿದ್ದರೂ ಸಹ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ನಿರೀಕ್ಷೆಗಿಂತ ಕಡಿಮೆಯಾಗಿದೆ. ಈ ಚಿತ್ರ ತಮಿಳಿನ 'ಕೈದಿ' ಸಿನಿಮಾದ ಹಿಂದಿ ರಿಮೇಕ್ ಆಗಿದೆ. ಭೋಲಾ ತನ್ನ ಮೊದಲ ವಾರದಲ್ಲಿ 56.8 ಕೋಟಿ ಗಳಿಸಿತು. ಬಿಡುಗಡೆಯಾದ ಎಂಟನೇ ದಿನದಂದು ಸುಮಾರು 3 ಕೋಟಿ ಕಲೆಕ್ಷನ್ ಮಾಡಿತು. ಸದ್ಯ ಈ ಸಿನಿಮಾವು 59.68 ಕೋಟಿ ಗಳಿಸಿದೆ.
ಬಿಡುಗಡೆಯಾದ ಮೊದಲ ದಿನ 11.20 ಕೋಟಿ, ಎರಡನೇ ದಿನ 7.40 ಕೋಟಿ ಗಳಿಸಿ ಕುಸಿತ ಕಂಡಿತು. ಅದಾಗಿ ವಾರಾಂತ್ಯದಲ್ಲಿ 12.20 ಕೋಟಿ ಮತ್ತು 13.48 ಕೋಟಿ ಗಳಿಸಿ ಉತ್ತಮ ಪ್ರದರ್ಶನ ಕಂಡಿತು. ಏಪ್ರಿಲ್ 21 ರಂದು ಸಲ್ಮಾನ್ ಖಾನ್ ಅವರ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಬಿಡುಗಡೆಯಾಗುವವರೆಗೂ ಭೋಲಾಗೆ ಚಿತ್ರಮಂದಿರಗಳಲ್ಲಿ ಯಾವುದೇ ಸಿನಿಮಾದ ಪೈಪೋಟಿಯೂ ಇರುವುದಿಲ್ಲ. ಹೀಗಾಗಿ ಈ ವಾರಾಂತ್ಯದಲ್ಲಿ ಚಿತ್ರವು ಉತ್ತಮ ಪ್ರದರ್ಶನ ಕಾಣುವ ಸಾಧ್ಯತೆಯಿದೆ. ಪಠಾಣ್ ಮತ್ತು ತೂ ಜೂಟಿ ಮೈನ್ ಮಕ್ಕರ್ ಸಿನಿಮಾದ ನಂತರ 2023ರಲ್ಲಿ ಅತಿ ಹೆಚ್ಚು ಗಳಿಕೆಯ ಚಿತ್ರ ಭೋಲಾ ಆಗಿದೆ.
ಇನ್ನು ತಮಿಳಿನ 'ಕೈದಿ' ಚಿತ್ರವನ್ನೇ ಕೊಂಚ ಬದಲಾಯಿಸಿ ಹಿಂದಿಯಲ್ಲಿ 'ಭೋಲಾ' ಎಂಬುದಾಗಿ ಸಿನಿಮಾ ಮಾಡಲಾಗಿದೆ. ಜೊತೆಗೆ ಹೆಚ್ಚಿನ ಸಿನಿ ಪ್ರೇಕ್ಷಕರು ಈ ಸಿನಿಮಾವನ್ನು ಈಗಾಗಲೇ ತಮಿಳಿನಲ್ಲಿ ವೀಕ್ಷಿಸಿರುವ ಕಾರಣ ನಿರೀಕ್ಷೆ ಮಟ್ಟದಲ್ಲಿ ಜನರಿಂದ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ. ಅಲ್ಲದೇ ಈಗಾಗಲೇ ಐಪಿಲ್ 2023 ಪ್ರಾರಂಭವಾಗಿದ್ದು, ಥಿಯೇಟರ್ಗೆ ತೆರಳಿ ಸಿನಿಮಾ ನೋಡುವವರ ಸಂಖ್ಯೆಯು ಕಡಿಮೆಯಾಗಿದೆ. ಇದರ ಹೊರತಾಗಿ ಈ ವೀಕೆಂಡ್ನಲ್ಲಿ ಒಳ್ಳೆಯ ರೀತಿಯಲ್ಲಿ ಕಲೆಕ್ಷನ್ ಮಾಡುವ ಚಾನ್ಸಸ್ ಕೂಡ ಜಾಸ್ತಿ ಇದೆ. ಭೋಲಾ ಸಿನಿಮಾವು ಜೈಲಿನಿಂದ ಬಿಡುಗಡೆ ಆಗಿರುವ ಕೈದಿ ಮತ್ತು ಅನಾಥ ಹುಡುಗಿಯ ಕಥೆಯನ್ನು ಹೇಳುತ್ತದೆ.