ಛಾಪ್ರಾ(ಬಿಹಾರ): ಭೋಜ್‌ಪುರಿಯ ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ಅವರು ಪಾಲ್ಗೊಂಡಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಹಠಾತ್ ಗುಂಡು ಹಾರಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ನಿಶಾ ಉಪಾಧ್ಯಾಯ ಅವರಿಗೆ ಗುಂಡು ತಗುಲಿದ್ದು, ಅವರನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೇಡೂರ್ ಗ್ರಾಮದ ವೀರೇಂದ್ರ ಸಿಂಗ್ ಅವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಹಾರದ ಸರನ್ ಜಿಲ್ಲೆಯ ಗರ್ಖಾ ಬ್ಲಾಕ್‌ನ ಗೌಹರ್ ಬಸಂತ್ ನಿವಾಸಿ ನಿಶಾ ಉಪಾಧ್ಯಾಯ ಅವರು ಸಂಗೀತ ಕಾರ್ಯಕ್ರಮ ಕೊಡುತ್ತಿದ್ದರು. ಈ ವೇಳೆ, ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ಗುಂಡು ಗಡಿಬಿಡಿಯಲ್ಲಿ ಗಾಯಕಿ ನಿಶಾ ಉಪಾಧ್ಯಾಯ ಅವರ ಕಾಲಿಗೆ ತಾಗಿದ್ದು, ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ತಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂಬ ಮಾಹಿತಿ ಇದೆ. ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಧೂಮಪಾನ ಮಾಡದ ಸೆಲೆಬ್ರಿಟಿಗಳು: ಮೊದಲು ಧೂಮಪಾನಕ್ಕೆ ದಾಸರಾಗಿದ್ದ ಈ ಸ್ಟಾರ್ಗಳು ಯಾವ ಕಾರಣಕ್ಕೆ ಬಿಟ್ಟರು ಗೊತ್ತಾ?
ಘಟನೆ ನಡೆದ ತಕ್ಷಣ ಗಾಯಕಿಯ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಅವರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದು ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಪುತ್ರಿಯ ಬಗ್ಗೆ ಸ್ಪಷ್ಟನೆ ನೀಡದ್ದರಿಂದ ಗಾಬರಿಯಲ್ಲಿದ್ದಾರೆ. ಯಾರೋ ಕಿಡಿಗೇಡಿಗಳು ಹಾಡು ಕೇಳುವ ಜೋಶ್ನಲ್ಲಿ ಈ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.