ಕನ್ನಡ ಚಿತ್ರಂಗದಲ್ಲಿ ಬಗೆಬಗೆಯ ಸಿನಿಮಾ, ಹೊಸಬರ ಆಗಮನ ಆಗುತ್ತಲೇ ಇದೆ. ಇದೀಗ 'ಭಗೀರಥ' ಚಿತ್ರತಂಡ ಸ್ಯಾಂಡಲ್ವುಡ್ನಲ್ಲಿ ಗಮನ ಸೆಳೆಯುತ್ತಿದೆ. ಜಮಾನ ಚಿತ್ರದ ನಾಯಕ ಜಯಪ್ರಕಾಶ್ ಮತ್ತು ನಿರ್ದೇಶಕ ರಾಮ್ ಜನಾರ್ದನ್ ಕಾಂಬೋದಲ್ಲಿ 'ಭಗೀರಥ' ಸಿನಿಮಾ ರೆಡಿಯಾಗುತ್ತಿದೆ. ಭಗೀರಥ ಚಿತ್ರದ ಮುಹೂರ್ತ ಸಮಾರಂಭ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ಮೊದಲ ಸನ್ನಿವೇಶಕ್ಕೆ ಹೆಸರಾಂತ ನಿರ್ದೇಶಕ ಓಂ ಸಾಯಿ ಪ್ರಕಾಶ್ ಆರಂಭ ಫಲಕ ತೋರಿದರು.
ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾತನಾಡಿ, ನಾನು ನಿರ್ದೇಶನ ಮಾಡಿರುವುದು ಹೆಚ್ಚು. ಅಭಿನಯಿಸಿರುವುದು ಕಡಿಮೆ. ನಿರ್ದೇಶಕರು ಮಠಾಧಿಪತಿ ಪಾತ್ರವನ್ನು ನೀವೇ ಮಾಡಬೇಕೆಂದರು, ಹಾಗಾಗಿ ಈ ಚಿತ್ರದಲ್ಲಿ ಮಠಾಧಿಪತಿ ಪಾತ್ರ ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ನಿರ್ದೇಶಕ ರಾಮ್ ಜನಾರ್ದನ್ ಮಾತನಾಡಿ, 2005ರಲ್ಲಿ "ಬಾಯ್ ಫ್ರೆಂಡ್" ಮೂಲಕ ನನ್ನ ಸಿನಿ ಜರ್ನಿ ಆರಂಭವಾಯಿತು. ನಂತರ ಕೆಲ ಚಿತ್ರಗಳಲ್ಲಿ ನಟಿಸಿದ್ದೇನೆ ಹಾಗೂ ಕೆಲವನ್ನು ನಿರ್ದೇಶಿಸಿದ್ದೇನೆ. ಇದೀಗ "ಭಗೀರಥ" ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಯಾವುದಾದರೂ ಒಂದು ಕೆಲಸವನ್ನು ಬಿಡದೆ ಸಾಧಿಸುವುದನ್ನು "ಭಗೀರಥ" ಪ್ರಯತ್ನ ಎನ್ನುತ್ತಾರೆ. ಈ ಪದಕ್ಕೂ ನಮ್ಮ ಚಿತ್ರಕ್ಕೂ ಸಂಬಂಧವಿದೆ. ಇಂದು ಮುಹೂರ್ತ ಸಮಾರಂಭ ನೆರವೇರಿದೆ. ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಅವರು ಮಠಾಧಿಪತಿಗಳ ಪಾತ್ರ ನಿರ್ವಹಿಸುತ್ತಿದ್ದಾರೆ. ಕಥೆ ಮೆಚ್ಚಿದ ರಮೇಶ್ ಹಾಗೂ ಭೈರಪ್ಪ ಮೈಸೂರು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಜಮಾನ ಚಿತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ನಟ ಜಯಪ್ರಕಾಶ್ ಮಾತನಾಡಿ, ನಾನು ಭಗೀರಥ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದೇನೆ. ನಿರ್ದೇಶಕರು ಕಥೆ ಚೆನ್ನಾಗಿ ಮಾಡಿಕೊಂಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದು ಚಿತ್ರದ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.