ಕರ್ನಾಟಕ

karnataka

ETV Bharat / entertainment

ಬೆಟ್ಟಿಂಗ್​ ಆ್ಯಪ್​ ಪ್ರಕರಣ: ಶ್ರದ್ಧಾ ಕಪೂರ್​ಗೆ ಇಡಿ ಸಮನ್ಸ್​, ಇಂದು ವಿಚಾರಣೆ - ಈಟಿವಿ ಭಾರತ ಕನ್ನಡ

ಬೆಟ್ಟಿಂಗ್​ ಆ್ಯಪ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್​ ನಟಿ ಶ್ರದ್ಧಾ ಕಪೂರ್​ ಅವರಿಗೆ ಇಡಿ ಸಮನ್ಸ್​ ಜಾರಿ ಮಾಡಿದ್ದು, ಇಂದೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

Mahadev Betting App case ED has summoned Shraddha kapoor
ಮಹಾದೇವ್​ ಬೆಟ್ಟಿಂಗ್​ ಆ್ಯಪ್​ ಪ್ರಕರಣ; ಶ್ರದ್ಧಾ ಕಪೂರ್​ಗೆ ಇಡಿ ಸಮನ್ಸ್​, ಇಂದು ವಿಚಾರಣೆ

By ETV Bharat Karnataka Team

Published : Oct 6, 2023, 3:22 PM IST

ಮಹಾದೇವ್​​ ಬೆಟ್ಟಿಂಗ್​ ಆ್ಯಪ್​ ಪ್ರಕರಣದಲ್ಲಿ ಬಾಲಿವುಡ್​ ತಾರೆಯರ ಹೆಸರು ಕೇಳಿಬರುತ್ತಿದೆ. ಈಗಾಗಲೇ ನಟ ರಣ್​ಬೀರ್​ ಕಪೂರ್​, ಹಾಸ್ಯನಟ ಕಪಿಲ್​ ಶರ್ಮಾ ಮತ್ತು ನಟಿಯರಾದ ಹುಮಾ ಖುರೇಷಿ, ಹೀನಾ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್​ ನೀಡಿದೆ. ಇದೀಗ ನಟಿ ಶ್ರದ್ಧಾ ಕಪೂರ್​ಗೂ ಸಮನ್ಸ್​ ಕಳುಹಿಸಿರುವ ಇಡಿ, ಇಂದೇ ತನಿಖೆಗೆ ಹಾಜರಾಗುವಂತೆ ಸೂಚಿಸಿದೆ. ಆದರೆ ಅವರು ವಿಚಾರಣೆಗೆ ಹಾಜರಾಗಿದ್ದಾರೆಯೇ? ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಎರಡು ವಾರ ಕಾಲಾವಕಾಶ ಕೋರಿದ ರಣ್​ಬೀರ್​:ರಣ್​ಬೀರ್​ ಕಪೂರ್​ ಅವರಿಗೆ ಅಕ್ಟೋಬರ್​ 4ರಂದು ಇಡಿ ಸಮನ್ಸ್​ ಜಾರಿ ಮಾಡಿತ್ತು. ಅಕ್ಟೋಬರ್​ 6ರಂದು ರಾಯ್​ಪುರದ ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗಬೇಕು ಎಂದು ಅಧಿಕಾರಿಗಳು ಸೂಚಿಸಿದ್ದರು. ಆದರೆ ನಟ ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ. ಆನ್‌ಲೈನ್ ಬೆಟ್ಟಿಂಗ್ ಆ್ಯಪ್​ನೊಂದಿಗೆ ಸಂಬಂಧ ಹೊಂದಿರುವ ಆರೋಪದಡಿ ಜಾರಿ ನಿರ್ದೇಶನಾಲಯ ತನಿಖೆ ಕೈಗೆತ್ತಿಕೊಂಡಿದೆ. ಇಡಿ ಗುರಿಯಲ್ಲಿ ರಣ್​​ಬೀರ್ ಕಪೂರ್ ಸೇರಿ 15 ಸೆಲೆಬ್ರಿಟಿಗಳು ಇದ್ದಾರೆ.

ನಿನ್ನೆ ಹಾಸ್ಯನಟ ಕಪಿಲ್​ ಶರ್ಮಾ, ನಟಿಯರಾದ ಹುಮಾ ಖುರೇಷಿ ಮತ್ತು ಹೀನಾ ಖಾನ್​ ಅವರಿಗೂ ಸಮನ್ಸ್​ ನೀಡಲಾಗಿತ್ತು. ಆದರೆ ಈ ಮೂವರಿಗೂ ಬೇರೆ ಬೇರೆ ದಿನಾಂಕಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿದೆ. ಈಗಿನ ಮಾಹಿತಿ ಪ್ರಕಾರ, ಈ ಮೂವರು ಕೂಡ ತನಿಖೆಗೆ ಹಾಜರಾಗಲು ಎರಡು ವಾರಗಳ ಕಾಲಾವಕಾಶ ಕೇಳಿದ್ದಾರೆ ಎನ್ನಲಾಗಿದೆ. ಈಗಾಗಲೇ ನಾಲ್ವರು ನಟರಿಗೆ ಸಮನ್ಸ್​ ಜಾರಿ ಮಾಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಸೆಲೆಬ್ರಿಟಿಗಳ ಹೆಸರು ಹೊರಬರುವ ಸಾಧ್ಯತೆ ಇದೆ.

ಏನಿದು ಪ್ರಕರಣ?: ಸುಮಾರು 15 ಸೆಲೆಬ್ರಿಟಿಗಳು ಯುಎಇಯಲ್ಲಿ ಮಹಾದೇವ್ ಬೆಟ್ಟಿಂಗ್ ಆ್ಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಆಯೋಜಿಸಿದ್ದ ಮ್ಯಾರೇಜ್​​ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಹಾಗಾಗಿ ಈ ಪ್ರಕರಣದಲ್ಲಿ ಟೈಗರ್ ಶ್ರಾಫ್, ರಾಹತ್ ಫತೇಹ್ ಅಲಿ ಖಾನ್, ಅತೀಫ್ ಅಸ್ಲಾಂ, ಕೃಷ್ಣ ಅಭಿಷೇಕ್, ನುಶ್ರತ್ ಭರುಚಾ, ಸನ್ನಿ ಲಿಯೋನ್ ಸೇರಿದಂತೆ 15 ಜನ ಖ್ಯಾತನಾಮರ ಹೆಸರು ಕೇಳಿಬಂದಿದೆ.

ಆನ್​ಲೈನ್​ ಬೆಟ್ಟಿಂಗ್​ ಆ್ಯಪ್​ ಮಹಾದೇವ್ ಬುಕ್ ಆ್ಯಪ್‌ನ ಸಂಸ್ಥಾಪಕರು ತಲೆ ಮರೆಸಿಕೊಂಡಿದ್ದು, ಹಲವು ರಾಜ್ಯಗಳಲ್ಲಿ ಪೊಲೀಸರು ಮತ್ತು ಇಡಿ ಸೇರಿ ತನಿಖೆ ನಡೆಸುತ್ತಿದೆ. ಈವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಯೊಂದಕ್ಕೆ ಹವಾಲಾ ಮೂಲಕ 100 ಕೋಟಿ ರೂ.ಗೂ ಹೆಚ್ಚು ಹಣ ವರ್ಗಾವಣೆಯಾಗಿದೆ ಎಂಬುದರ ಕುರಿತು ಪುರಾವೆಗಳನ್ನು ಸಹ ಇಡಿ ಸಂಗ್ರಹಿಸಿದೆ.

ಬೆಟ್ಟಿಂಗ್ ಆ್ಯಪ್‌ನ ಪ್ರಚಾರಕ ಸೌರಭ್ ಚಂದ್ರಕರ್ ಅವರ ಅದ್ಧೂರಿ ವಿವಾಹ ಸಮಾರಂಭದಲ್ಲಿ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ಹಣಕಾಸು ತನಿಖಾ ಸಂಸ್ಥೆಯು ಕಳೆದ ತಿಂಗಳು ನಡೆಸಿದ ತನಿಖೆಯಲ್ಲಿ, ಹೋಟೆಲ್‌ಗಳ ಬಿಲ್​, ಟ್ರಾನ್ಸ್​ಪೋರ್ಟ್ ಬಿಲ್​ಗಳ ಮಾಹಿತಿ ಪಡೆದುಕೊಂಡಿವೆ. ದೊಡ್ಡ ಮೊತ್ತದಲ್ಲಿ ವ್ಯವಹಾರ ನಡೆದಿದೆ.

ನಾಗ್ಪುರದಿಂದ ಯುಎಇಗೆ ಕುಟುಂಬ ಸದಸ್ಯರನ್ನು ಕರೆದೊಯ್ಯಲು ಖಾಸಗಿ ಜೆಟ್‌ ಬಳಸಲಾಗಿದೆ. ದುಬೈನಲ್ಲಿ ಅದ್ಧೂರಿ ಮದುವೆ ಸಮಾರಂಭಕ್ಕಾಗಿ ಮಹದೇವ್ ಬುಕ್​​ ಆ್ಯಪ್​​ ಸುಮಾರು 200 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಎಂದು ಆರೋಪಿಸಲಾಗಿದೆ. ಮದುವೆಯ ಮೆರುಗು ಹೆಚ್ಚಿಸಲು ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳಲಾಗಿತ್ತು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ವೆಡ್ಡಿಂಗ್ ಪ್ಲಾನರ್‌ಗಳು, ಡ್ಯಾನ್ಸರ್‌ಗಳು, ಡೆಕೋರೇಟರ್‌ಗಳು ಸೇರಿದಂತೆ ಹಲವರನ್ನು ಮುಂಬೈನಿಂದಲೇ ನೇಮಿಸಲಾಗಿತ್ತು. ಹವಾಲಾ ಮೂಲಕ ಹಣ ಪಾವತಿ ಮಾಡಲಾಗಿದೆ ಎಂಬ ಆರೋಪಗಳಿವೆ.

ಇದನ್ನೂ ಓದಿ:ಶಿಕ್ಷಕರ ನೇಮಕಾತಿ ಹಗರಣ: ಇಡಿ ವಿಚಾರಣೆಗೆ ಹಾಜರಾಗಲ್ಲ ಎಂದ ತೃಣಮೂಲ ಸಂಸದ ಬ್ಯಾನರ್ಜಿ

ABOUT THE AUTHOR

...view details