ಬೆಂಗಳೂರು: ಕನ್ನಡ ಚಿತ್ರರಂಗದ ನಟ ನಾಗಭೂಷಣ್ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದಾರೆ. ಪ್ರತ್ಯಕ್ಷದರ್ಶಿಗಳ ಹೇಳಿಕೆ ಸಹಿತ ಪಿಡಬ್ಲ್ಯೂಡಿ, ಸಾರಿಗೆ ಇಲಾಖೆ ಅಧಿಕಾರಿಗಳ ವರದಿ, ನಾಗಭೂಷಣ್ ರಕ್ತದ ಮಾದರಿ ಪರಿಶೀಲಿಸಿದ್ದ ವೈದ್ಯಕೀಯ ವರದಿ, ಸಿಸಿಟಿವಿ ದೃಶ್ಯಗಳು ಸೇರಿದಂತೆ 22 ಜನರ ಹೇಳಿಕೆಯ ಸಾಕ್ಷ್ಯ ಆಧರಿಸಿ
ಐಪಿಸಿ ಸೆಕ್ಷನ್ 279 (ಅತಿವೇಗ ಹಾಗೂ ಅಜಾಗರೂಕ ಚಾಲನೆ), 304A (ನಿರ್ಲಕ್ಷ್ಯತೆಯಿಂದ ಸಾವಿಗೆ ಕಾರಣ) ಆರೋಪದಡಿ ಸರಿ ಸುಮಾರು 65 ಪುಟಗಳ ಚಾರ್ಜ್ಶೀಟ್ ಅನ್ನು ನ್ಯಾಯಾಲಕ್ಕೆ ಸಲ್ಲಿಸಲಾಗಿದೆ.
ಅಪಘಾತದ ಸಂದರ್ಭದಲ್ಲಿ ರಸ್ತೆಯು ಉತ್ತಮ ಸ್ಥಿತಿಯಲ್ಲಿತ್ತು ಎಂದು ಪಿಡಬ್ಲ್ಯೂಡಿ ಇಲಾಖೆ ವರದಿ ನೀಡಿದೆ. ಅಲ್ಲದೇ, ಅಪಘಾತಕ್ಕೆ ಕಾರಣವಾಗುವಂತಹ ಯಾವುದೇ ತಾಂತ್ರಿಕ ದೋಷಗಳು ನಾಗಭೂಷಣ್ ಹೊಂದಿದ್ದ ಎಸ್.ಯು.ವಿ ವಾಹನದಲ್ಲಿ ಇರಲಿಲ್ಲ ಎಂದು ಸಾರಿಗೆ ಇಲಾಖೆ ವರದಿಯಲ್ಲಿ ತಿಳಿಸಿದೆ. ಮತ್ತೊಂದೆಡೆ, ಅಪಘಾತದ ಸಂದರ್ಭದಲ್ಲಿ ನಾಗಭೂಷಣ್ ಮದ್ಯಪಾನ ಮಾಡಿರಲಿಲ್ಲ ಎಂದು ವೈದ್ಯಕೀಯ ವರದಿಯಲ್ಲಿ ದೃಢಪಟ್ಟಿದೆ.
ಅಪಘಾತ ನಡೆದ ಸ್ಥಳದಿಂದ ನೂರು ಮೀಟರ್ ಮುನ್ನ ಸ್ಪೀಡ್ ಬ್ರೇಕರ್ ಇದೆಯಾದರೂ ಅತಿ ವೇಗವಾಗಿ ಬಂದಿದ್ದ ನಾಗಭೂಷಣ್ ನಂತರ ಪಾದಚಾರಿ ದಂಪತಿ ಗಮನಿಸಿದ್ದಾರೆ. ಆದರೆ ಬ್ರೇಕ್ ಬದಲು ಆ್ಯಕ್ಸಲರೇಟರ್ ತುಳಿದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.