'ಜೂಲಿಯೆಟ್ 2' ಚಿತ್ರ ಟ್ರೇಲರ್ನಿಂದಲೇ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರೋ ಸಿನಿಮಾ. ಪ್ರೇಮಪೂಜ್ಯಂ ಚಿತ್ರದ ಬೆಡಗಿ ಬೃಂದಾ ಆಚಾರ್ಯ ದೌರ್ಜನ್ಯ ವಿರುದ್ಧ ಸಿಡಿದೇಳುವ ದುರ್ಗಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದು, ಈ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಸದ್ಯ ಆನಂದ್ ಆಡಿಯೋ ಸಂಸ್ಥೆ ಮೂಲಕ ಜೂಲಿಯೆಟ್ 2 ಚಿತ್ರದ ಟ್ರೇಲರ್ ಬಿಡುಗಡೆಯಾಗಿ ಮಿಲಿಯನ್ ಜನ ನೋಡಿ ಮೆಚ್ಚಿಕೊಂಡಿದ್ದಾರೆ.
ಜೂಲಿಯೆಟ್ 2 ಹೆಸರು ಹೇಳುವ ಹಾಗೆ ಇದೊಂದು ಮಹಿಳಾ ಪ್ರಧಾನ ಚಿತ್ರ. ತೊಂದರೆಗೆ ಸಿಲುಕಿದ ಹೆಣ್ಣುಮಗಳೊಬ್ಬಳು ಹೇಗೆ ಪ್ರತಿಕಾರ ತೀರಿಸಿಕೊಳ್ಳುತ್ತಾಳೆ? ಎಂಬುದು ಪ್ರಮುಖ ಕಥಾಹಂದರ. ಸಾಮಾನ್ಯವಾಗಿ "ಜೂಲಿಯೆಟ್" ಎಂದ ತಕ್ಷಣ ಪ್ರೇಮಕಥೆ ಅಂದುಕೊಳ್ಳುವುದು ವಾಡಿಕೆ. ಆದರೆ, ಇದು ಲವ್ ಸ್ಟೋರಿ ಅಲ್ಲ. ಇಲ್ಲಿ ರೋಮಿಯೋ ಕೂಡ ಇರುವುದಿಲ್ಲ. ಹಾಗಿದ್ದರೆ ಈ ಸಿನಿಮಾ ಕಥೆಯಾದರೂ ಏನು? ಎಂಬುದೇ ಕುತೂಹಲ.
ಈ ಚಿತ್ರದ ಬಗ್ಗೆ ಮಾತನಾಡಿರುವ ನಾಯಕಿ ಬೃಂದಾ ಆಚಾರ್ಯ, "ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು. ನಾನು ಜೂಲಿಯೆಟ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇದೊಂದು ವಿಭಿನ್ನ ಕಥೆ ಎನ್ನಬಹುದು. ಮಹಿಳೆ ಅಬಲೆಯಲ್ಲ, ಸಬಲೆ ಎಂದು ಹೇಳಲು ನಿರ್ದೇಶಕರು ಹೊರಟ್ಟಿದ್ದಾರೆ. ತಂದೆ - ಮಗಳ ಬಾಂಧವ್ಯದ ಸನ್ನಿವೇಶಗಳು ಮನ ಮಿಡಿಯತ್ತದೆ. ಕಾಡಿನಲ್ಲಿ ನಡೆದ ಚಿತ್ರೀಕರಣದ ಅನುಭವ ಮರೆಯಲು ಅಸಾಧ್ಯ. ಎಲ್ಲರೂ ಬೆವರು ಸುರಿಸಿ ಈ ಚಿತ್ರ ಮಾಡಿದ್ದೇವೆ. ಅಷ್ಟೇ ಅಲ್ಲ ನಾವು ರಕ್ತ ಸುರಿಸಿ ಸಿನಿಮಾ ಮಾಡಿದ್ದೇವೆ ಎನ್ನಬಹುದು. ಏಕೆಂದರೆ ಕಾಡಿನಲ್ಲಿ ಜಿಗಣೆಗಳು ಅಷ್ಟು ಕಾಟ ಕೊಟ್ಟಿದೆ" ಎಂದು ತಮ್ಮ ಅನುಭವ ಹಂಚಿಕೊಂಡರು.