'ಗರಡಿ' ಮೈಸೂರು ಹಾಗೂ ಉತ್ತರ ಕರ್ನಾಟಕದ ಭಾಗದಲ್ಲಿ ಹೆಚ್ಚು ಕೇಳಿ ಬರುವ ಹೆಸರು. ಈ ಹೆಸರಿನ ಮೇಲೆ ಸ್ಯಾಂಡಲ್ವುಡ್ನಲ್ಲಿ ಚಿತ್ರ ಬರ್ತಾ ಇರೋದು ಗೊತ್ತಿರುವ ವಿಚಾರ. ಯೋಗರಾಜ್ ಭಟ್ ನಿರ್ದೇಶನದ ಬಿ.ಸಿ ಪಾಟೀಲ್ ಹಾಗೂ ಯಶಸ್ ಸೂರ್ಯ ಅಭಿನಯದ ಗರಡಿ ಸಿನಿಮಾ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿದೆ. ಇತ್ತೀಚೆಗೆ ರಾಮುಹಳ್ಳಿಯ ಜಿ ವಿ ಅಯ್ಯರ್ ಸ್ಟುಡಿಯೋದಲ್ಲಿ ಗರಡಿಮನೆ ಸೆಟ್ ಹಾಕಿ ಗರಡಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ.
ಗರಡಿ ಮನೆ ಸೆಟ್ನಲ್ಲಿ ಚಿತ್ರೀಕರಣ:ಅಲ್ಲಿ ಕೆಲವು ದಿನಗಳ ಚಿತ್ರೀಕರಣ ನಡೆಸುವುದರೊಂದಿಗೆ ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಬಗ್ಗೆ ಚಿತ್ರತಂಡ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಗರಡಿ ಸಿನಿಮಾದ ಸೂತ್ರಧಾರ ಯೋಗರಾಜ್ ಭಟ್ ಮಾತನಾಡಿ, ಸುಮಾರು ಎಪ್ಪತ್ತು ದಿನಗಳ ಚಿತ್ರೀಕರಣದ ನಂತರ ಇಂದು 'ಗರಡಿ' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಜಿ ವಿ ಅಯ್ಯರ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ 'ಗರಡಿ' ಮನೆ ಸೆಟ್ನಲ್ಲಿ ಚಿತ್ರೀಕರಣ ಮಾಡಿದ್ದೇವೆ.
ಸಿನಿಮಾದ ವಿಶೇಷ ಎಂದರೆ, ಕಡೂರು ಶಾಸಕ ಬೆಳ್ಳಿ ಪ್ರಕಾಶ್ ಅವರು ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ ಸೂರ್ಯ, ಸೋನಾಲ್ ಮೊಂತೆರೊ, ಬಿ.ಸಿ. ಪಾಟೀಲ್, ರವಿಶಂಕರ್, ಸುಜಯ್ ಬೇಲೂರು, ರಘು, ಧರ್ಮಣ್ಣ, ಚೆಲುವರಾಜ್, ಪೃಥ್ವಿ ಮುಂತಾದವರು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಿತ್ರಕ್ಕೆ ಬಂಡವಾಳವನ್ನೂ ಹೂಡಿರುವ ನಿರ್ಮಾಪಕ ಬಿ.ಸಿ. ಪಾಟೀಲ್ ಅವರಿಗೆ ವಿಶೇಷ ಧನ್ಯವಾದಗಳು. 'ಗರಡಿ' ಸಿನಿಮಾ ಹಳೇ ಮೈಸೂರು ಭಾಗದಲ್ಲಿ ನಡೆಯುವ ಕಥೆ. ದೇಸೀ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ಈ ವಿಭಿನ್ನ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದರು.
ಚಿತ್ರೀಕರಣ ಮುಕ್ತಾಯ:ಬಿ.ಸಿ ಪಾಟೀಲ್ ಮಾತನಾಡಿ, ಗರಡಿ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರ ಚೆನ್ನಾಗಿ ಬಂದಿದೆ. ಚಿತ್ರದ ಆಡಿಯೋ ಹಕ್ಕು ಸರಿಗಮಪ ಸಂಸ್ಥೆಗೆ ಒಂದು ಕೋಟಿಗೆ ಮಾರಾಟವಾಗಿದೆ. ಡಬ್ಬಿಂಗ್, ರಿಮೇಕ್ ರೈಟ್ಸ್ಗೂ ಸಾಕಷ್ಟು ಬೇಡಿಕೆ ಇದೆ. ನಮ್ಮ ಸಂಸ್ಥೆಯ ನಿರ್ಮಾಣ ಮಾಡಿರುವ ಹದಿನಾರನೇ ಚಿತ್ರ ಇದು. ಈ ಸಿನಿಮಾ ಚೆನ್ನಾಗಿ ಮೂಡಿ ಬಂದಿದೆ ಎಂದರು.