ಹಾರರ್ ಸಿನಿಮಾ ಅಂದಾಕ್ಷಣ ಕಾಡು, ಕತ್ತಲೆ, ದೆವ್ವ.. ಹೀಗೆ ಅನೇಕ ಅಂಶಗಳು ಕಣ್ಣಮುಂದೆ ಬರುತ್ತದೆ. ಆದರೆ, ಇಂತಹದ್ದೇ ಭಯಾನಕ ಕಥೆಯುಳ್ಳ 'ಬಸ್ರಿಕಟ್ಟೆ' ಸಿನಿಮಾ ಕೊಂಚ ವಿಭಿನ್ನವಾಗಿ ಪ್ರೇಕ್ಷಕರ ಮುಂದೆ ಬರೋದಕ್ಕೆ ಸಜ್ಜಾಗಿದೆ. ಚಿತ್ರಕ್ಕೆ ಯುವ ನಿರ್ದೇಶಕ ವೈಭವ್.ಎಂ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಸಸ್ಪೆನ್ಸ್- ಹಾರರ್ ಸಿನಿಮಾವಾದರೂ ರಿಯಲಿಸ್ಟಿಕ್ ಆಗಿ ಚಿತ್ರೀಕರಣ ಮಾಡಿರುವುದು ವಿಶೇಷ.
ಕನ್ನಡದ ಕಿರಗೂರಿನ ಗಯ್ಯಾಳಿಗಳು, ಕಾಫಿ ತೋಟ ಸೇರಿದಂತೆ ಮಲಯಾಳಂನ ಅನೇಕ ಸಿನಿಮಾಗಳಲ್ಲಿ ನಟಿಸಿರುವ ರಾಹುಲ್ ಮಾದೇವ್ ಹಾಗೂ ಮುಂದಿನ ನಿಲ್ದಾಣ ಸಿನಿಮಾ ಖ್ಯಾತಿಯ ಅನನ್ಯಾ ಕಶ್ಯಪ್ 'ಬಸ್ರಿಕಟ್ಟೆ' ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡಿರುವ ನಿರ್ದೇಶಕ ವೈಭವ್, ಕರ್ನಾಟಕದಲ್ಲಿರುವ ಖ್ಯಾತ ಸ್ಥಳ ಬಸ್ರಿಕಟ್ಟೆಗೂ ಈ ಚಿತ್ರಕ್ಕೂ ಸಂಬಂಧವಿಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸಿದ್ದಾರೆ.
"ಈ ಚಿತ್ರದಲ್ಲಿ ಸಿನಿಮ್ಯಾಟಿಕ್ ಫೀಲ್ಗಿಂತ ನ್ಯಾಚುರಲ್ ಆಗಿ ಮೂಡಿಬರಲಿ ಎಂಬ ಕಾರಣಕ್ಕೆ ರಿಯಲಿಸ್ಟಿಕ್ ಆಗಿಯೇ ಶೂಟಿಂಗ್ ಮಾಡಿದ್ದೇವೆ. ಮಂಗಳೂರು, ಚಿಕ್ಕಮಗಳೂರು, ಮೂಡುಬಿದಿರೆ ಮೊದಲಾದ ಸ್ಥಳಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ನಮ್ಮ ಸಿನಿಮಾದ ಟ್ರೇಲರ್ ನೋಡಿದವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಟೆಕ್ನಿಕಲ್ ಆಗಿಯೂ ಚಿತ್ರ ತುಂಬಾ ಸ್ಟ್ರಾಂಗ್ ಇದೆ" - ವೈಭವ್.ಎಂ ನಿರ್ದೇಶಕ
ಕಳೆದ ಹತ್ತು ವರ್ಷಗಳಿಂದ ಹಲವು ನಿರ್ದೇಶಕರ ಬಳಿ ನಿರ್ದೇಶನದ ಪಟ್ಟುಗಳನ್ನು ಕಲಿತಿರುವ ವೈಭವ್, ಕೆಲವು ನಿರ್ಮಾಣ ಸಂಸ್ಥೆಗಳಲ್ಲಿ ಸಾಕಷ್ಟು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಅನುಭವವಿದೆ. ನಂತರ ಕೆಲವು ಕಿರುಚಿತ್ರಗಳನ್ನೂ ತಯಾರಿಸಿದ್ದಾರೆ. ಇಷ್ಟೆಲ್ಲ ಅನುಭವಗಳನ್ನು ಬೆನ್ನಿಗೆ ಕಟ್ಟಿಕೊಂಡು ಇದೀಗ ಬಸ್ರಿಕಟ್ಟೆ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ.