'ಬಾನ ದಾರಿಯಲ್ಲಿ' ಈ ಪದ ಕೇಳಿದ್ರೆ ನಮಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನೆನಪಾಗುತ್ತಾರೆ. ಈ ಪದವೀಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹೊಸ ಚಿತ್ರದ ಟೈಟಲ್. ನಿರ್ದೇಶಕ ಪ್ರೀತಂ ಗುಬ್ಬಿ ಮತ್ತು ಗಣಿ ಕಾಂಬಿನೇಷನ್ನಲ್ಲಿ ಮೂಡಿ ಬರುತ್ತಿರುವ ಸ್ಯಾಂಡಲ್ವುಡ್ನ ಬಹು ನಿರೀಕ್ಷಿತ ಚಿತ್ರ. ಈ ಬಾನದಾರಿಯಲ್ಲಿ ಚಿತ್ರದ ಮೊದಲ ಹಾಡು ಬಿಡುಗಡೆ ಆಗಿದ್ದು, ಗಣಿ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಾಹಿತಿ ಕವಿರಾಜ್ ಅವರು ಬರೆದಿರುವ "ನಿನ್ನನ್ನು ನೋಡಿದ ನಂತರ" ಎಂಬ ಗೀತೆ ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿದೆ. ಹಿರಿಯ ಪತ್ರಕರ್ತ ಬಿ.ಎನ್ ಸುಬ್ರಹ್ಮಣ್ಯ ಈ ಹಾಡನ್ನು ಬಿಡುಗಡೆ ಮಾಡಿ ಬಾನ ದಾರಿಯಲ್ಲಿ ಚಿತ್ರದ ಯಶಸ್ವಿಗೆ ಶುಭ ಕೋರಿದರು.
ಲವ್ ಸ್ಟೋರಿ ಜೊತೆಗೆ ಕ್ರಿಕೆಟ್ ಕಥೆ: ನಿರ್ದೇಶಕ ಪ್ರೀತಂ ಗುಬ್ಬಿ, ಇದು ಕೋವಿಡ್ ಸಮಯದಲ್ಲಿ ಅಂದರೆ ಸುಮಾರು ಎರಡೂವರೆ ವರ್ಷಗಳ ಹಿಂದೆ ನಾನು ಹಾಗೂ ಪ್ರೀತಾ ಜಯರಾಂ ಸೇರಿ ಮಾಡಿದ ಕಥೆ. ಈಗ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡುತ್ತಿದ್ದೇವೆ. ಈ ಚಿತ್ರ ಲವ್ ಸ್ಟೋರಿ ಜೊತೆಗೆ ಕ್ರಿಕೆಟ್ ಕಥೆ ಹೊಂದಿದೆ ಎಂದರು.
ಆನಂದ್ ಆಡಿಯೋಗೆ ಧನ್ಯವಾದ ಅರ್ಪಿಸಿದ ಗಣಿ: ಗೋಲ್ಡನ್ ಸ್ಟಾರ್ ಗಣೇಶ್ ಮಾತನಾಡಿ, ನಾನು ಮೊದಲು ಆನಂದ್ ಆಡಿಯೋ ಅವರಿಗೆ ಧನ್ಯವಾದ ಹೇಳುತ್ತೇನೆ. ಏಕೆಂದರೆ ನನ್ನ ಸಿನಿ ಜರ್ನಿಯಲ್ಲೇ ಅತಿ ಹೆಚ್ಚು ಮೊತ್ತ ಕೊಟ್ಟು ಈ ಚಿತ್ರದ ಆಡಿಯೋ ರೈಟ್ಸ್ ಪಡೆದುಕೊಂಡಿದ್ದಾರೆ ಎಂದರು. ಇನ್ನು ಈ ಹಾಡನ್ನು ಕವಿರಾಜ್ ಬರೆದಿದ್ದಾರೆ. ಹುಡುಗಾಟ ಚಿತ್ರದ ಮಂದಾಕಿನಿಯೇ ಹಾಡಿನಿಂದ ಶುರುವಾದ ನಮ್ಮ ಜರ್ನಿ ಈ ಹಾಡಿನ ತನಕ ಮುಂದುವರೆದಿದೆ. ನನ್ನ ಅನೇಕ ಹಿಟ್ ಹಾಡುಗಳನ್ನು ಕವಿರಾಜ್ ಅವರೇ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ಈ ಚಿತ್ರದ ಮತ್ತೊಂದು ಹೈಲೆಟ್. ನಿರ್ದೇಶಕ ಪ್ರೀತಂ ಗುಬ್ಬಿ ಈ ಚಿತ್ರವನ್ನು ಉತ್ತಮವಾಗಿ ನಿರ್ದೇಶಿಸಿದ್ದಾರೆ ಎಂದು ತಿಳಿಸಿದರು. ಈ ಚಿತ್ರದ ಡಬ್ಬಿಂಗ್ ಮಾಡಬೇಕಾದರೆ ಕೆಲವೊಮ್ಮೆ ಬಹಳ ಭಾವುಕನಾದೆ ಎಂದೂ ಕೂಡ ತಿಳಿಸಿದರು.
ನಾಯಕಿಯರಾದ ರುಕ್ಮಿಣಿ ವಸಂತ್ ಹಾಗು ರೀಷ್ಮಾ ನಾಣಯ್ಯ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಪ್ರೀತಾ ಜಯರಾಮ್ - ಪ್ರೀತಂ ಗುಬ್ಬಿ ಸೇರಿ ಒಳ್ಳೆಯ ಕಥೆ ಬರೆದಿದ್ದಾರೆ. ತಂತ್ರಜ್ಞರ ಕಾರ್ಯವೈಖರಿ ಕೂಡ ಅದ್ಭುತವಾಗಿದೆ. ಕೀನ್ಯಾ ಭಾಗದ ಚಿತ್ರೀಕರಣವನ್ನು ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಈ ಚಿತ್ರದಲ್ಲಿ ಕ್ರಿಕೆಟ್ ಆಟಗಾರನಾಗಿ ಕಾಣಿಸಿಕೊಂಡಿದ್ದೇನೆ. ಹಾಗಾಗಿ ನಮ್ಮ ಚಿತ್ರ ತಂಡ ಹಾಗೂ ಸ್ಟಾರ್ ರಿಪೋರ್ಟ್ರ್ಸ್ ತಂಡದ ನಡುವೆ ಕ್ರಿಕೆಟ್ ಪಂದ್ಯ ಏರ್ಪಡಿಸಲಾಗಿತ್ತು ಅಂತಾ ಗಣೇಶ್ ಹೇಳಿದರು.