ನಟ ಶಾರುಖ್ ಖಾನ್ ಮತ್ತು ನಟಿ ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಪಠಾಣ್ ಸಿನಿಮಾ ಬಾಲಿವುಡ್ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದು. ಇದೇ ಜನವರಿ 25 ರಂದು ಬಿಡುಗಡೆ ಆಗಲಿರುವ ಈ ಚಿತ್ರದ ಟ್ರೈಲರ್ ಅನ್ನು 10 ರಂದು ರಿಲೀಸ್ ಮಾಡಲು ಚಿತ್ರತಂಡ ಸಿದ್ಧತೆ ನಡೆಸಿದೆ. ಪ್ರಚಾರದ ಭಾಗವಾಗಿ ಟ್ರೈಲರ್ಗೂ ಮುನ್ನ ಎರಡು ಹಾಡುಗಳನ್ನು ಚಿತ್ರ ತಯಾರಕರು ಬಿಡುಗಡೆ ಮಾಡಿದ್ದು, ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹಲವೆಡೆ ಪ್ರತಿಭಟನೆ ಕೂಡ ನಡೆದಿದೆ.
ಪಠಾಣ್ ಪೋಸ್ಟರ್ ಹರಿದ ಘಟನೆ:ಪಠಾಣ್ ಚಿತ್ರದ ಬಿಡುಗಡೆಯನ್ನು ವಿರೋಧಿಸಿ ಅಹಮದಾಬಾದ್ ನಗರದ ವಸ್ತ್ರಾಪುರ ಪ್ರದೇಶದ ಆಲ್ಫಾ ಒನ್ ಮಾಲ್‌ನಲ್ಲಿರುವ ಥಿಯೇಟರ್‌ನಲ್ಲಿ ಚಿತ್ರದ ಪೋಸ್ಟರ್‌ಗಳನ್ನು ಹರಿದು ಪ್ರತಿಭಟನೆ ನಡೆಸಿದ ಭಜರಂಗ ದಳದ ಕಾರ್ಯಕರ್ತರನ್ನು ಬುಧವಾರ ಬಂಧಿಸಲಾಯಿತು. ಈ ಸಂಬಂಧ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ. ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಥಿಯೇಟರ್‌ನಲ್ಲಿ ಅಂಟಿಸಿರುವುದು ಬಜರಂಗದಳದ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು ಎಂದು ಗುಜರಾತ್ ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ವಕ್ತಾರ ಹಿತೇಂದ್ರ ಸಿಂಗ್ ರಜಪೂತ್ ಹೇಳಿದ್ದಾರೆ. ಹಾಗಾಗಿ ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಆಗುವುದು ಬೇಡ ಎಂದು ಪ್ರತಿಭಟನೆ ನಡೆಸಿದ್ದು, ಪೊಲೀಸರು ವಶಕ್ಕೆ ತೆಗೆದುಕೊಂಡರು.
ವರದಿಗಳ ಪ್ರಕಾರ, ಪಠಾಣ್ ಚಿತ್ರದ ಪೋಸ್ಟರ್‌ಗಳನ್ನು ಕಿತ್ತು ಹಾಕಲು ವಸ್ತ್ರಾಪುರದ ಆಲ್ಫಾ ಒನ್ ಮಾಲ್‌ನ ಥಿಯೇಟರ್‌ಗೆ ತೆರಳಿದ್ದ ಭಜರಂಗದಳದ ಸದಸ್ಯರು ಸುಮಾರು 10-12 ಮಂದಿ ಇದ್ದರು ಎಂದು ವಸ್ತ್ರಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಜೆಕೆ ದಂಗರ್ ಹೇಳಿದ್ದಾರೆ. ಚಿತ್ರದ ಪೋಸ್ಟರ್‌ಗಳನ್ನು ಹರಿದಿದ್ದಾರೆ. ಬಳಿಕ ಹೊರ ಬಂದು ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದರು. ನಾವು ಅವರಲ್ಲಿ 5-6 ಮಂದಿಯನ್ನು ಬಂಧಿಸಿ ಸುಮಾರು ಒಂದೂವರೆ ಗಂಟೆಗಳ ನಂತರ ಬಿಡುಗಡೆ ಮಾಡಿದ್ದೇವೆ. ಚಿತ್ರಮಂದಿರದಿಂದ ಯಾವುದೇ ದೂರು ದಾಖಲಾಗಿಲ್ಲ ಎಂದು ದಂಗರ್ ಹೇಳಿದ್ದಾರೆ.