ಉಜ್ಜೈನ್ (ಮಧ್ಯಪ್ರದೇಶ): ಬಾಲಿವುಡ್ ತಾರೆಗಳಾದ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮಧ್ಯಪ್ರದೇಶದ ಉಜ್ಜೈನ್ನ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಬಜರಂಗ ದಳದ ಕಾರ್ಯಕರ್ತರು ಮುಖ್ಯ ದ್ವಾರದಲ್ಲೇ ಗದ್ದಲ ಸೃಷ್ಟಿಸಿದ್ದಾರೆ. ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ ಎಂದು ಸ್ಟಾರ್ ನಟ-ನಟಿಯರನ್ನು ಅಲ್ಲಿಯೇ ತಡೆದು ಪ್ರತಿಭಟನೆ ನಡೆಸಿದರು.
ರಣಬೀರ್ ಕಪೂರ್, ಆಲಿಯಾ ಭಟ್ ನಟನೆಯ ಮತ್ತು ಅಯಾನ್ ಮುಖರ್ಜಿ ನಿರ್ದೇಶನದ ಬ್ರಹ್ಮಾಸ್ತ್ರ ಸಿನಿಮಾ ಸೆಪ್ಟೆಂಬರ್ 9ರಂದು ಬಿಡುಗಡೆಯಾಗಲಿದೆ. ಈ ನಿಟ್ಟಿನಲ್ಲಿ ಪ್ರಾರ್ಥನೆ ಸಲ್ಲಿಸಲು ಮಹಾಕಾಳೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಆದರೆ, ಬಜರಂಗ ದಳದ ಕಾರ್ಯಕರ್ತರ ಪ್ರತಿಭಟನೆಯ ಬಿಸಿಯನ್ನು ಎದುರಿಸಬೇಕಾಯಿತು. ಗೋಮಾಂಸ ತಿನ್ನುತ್ತೇನೆ ಎಂದು ಎಂಬ ರಣಬೀರ್ ಹೇಳಿಕೆಯನ್ನು ಖಂಡಿಸಿ ಕಪ್ಪು ಬಾವುಟ ಹಿಡಿದುಕೊಂಡು ಆಕ್ರೋಶ ವ್ಯಕ್ತಪಡಿಸಿದರು.
ರಣಬೀರ್ ಕಪೂರ್ ಗೋಮಾತೆಯ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಗೋಮಾಂಸ ತಿನ್ನುವುದು ಒಳ್ಳೆಯದು ಎಂದು ಹೇಳಿದ್ದಾರೆ. ಹೀಗಾಗಿ ರಣಬೀರ್ ದಂಪತಿಗೆ ದೇವಾಲಯದೊಳಗೆ ಪ್ರವೇಶಿಸಲು ಬಿಡುವುದಿಲ್ಲ. ಗೋಮಾಂಸ ಭಕ್ಷಕರನ್ನು ದೇವಾಲಯಕ್ಕೆ ಪ್ರವೇಶಿಸಲು ಬಿಡುವುದಿಲ್ಲ ಮತ್ತು ಗೋಮಾಂಸ ತಿನ್ನುವವರಿಗೆ ದೇವಾಲಯವನ್ನು ಪ್ರವೇಶಿಸಲು ಹೇಗೆ ಅನುಮತಿ ನೀಡಲಾಯಿತು ಎಂಬುದಕ್ಕೂ ಆಡಳಿತವು ಉತ್ತರಿಸಬೇಕೆಂದು ಬಜರಂಗ ದಳದ ಮುಖಂಡ ಅಂಕಿತ್ ಚೌಬೆ ಕಿಡಿಕಾರಿದರು.