ಟಗರು ಚಿತ್ರದ ಬಳಿಕ ಶಿವರಾಜ್ ಕುಮಾರ್ ಜೊತೆ ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಂಡ ಬೈರಾಗಿ ಚಿತ್ರ ಒಟಿಟಿಯಲ್ಲಿ ಪ್ರಸಾರ ಆಗುತ್ತಿದೆ. ವಿಮರ್ಶಕರ ಹಾಗೂ ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾದ ಬೈರಾಗಿ ಚಲನಚಿತ್ರವನ್ನು ವೂಟ್ ಸೆಲೆಕ್ಟ್ನಲ್ಲಿ ನೋಡಬಹುದಾಗಿದೆ.
ಈ ಬಗ್ಗೆ ಮಾತನಾಡಿರುವ ಬೈರಾಗಿ ಸಿನಿಮಾ ನಾಯಕ ನಟ ಶಿವರಾಜ್ ಕುಮಾರ್, ಬೈರಾಗಿಯಂತಹ ಸಂಪೂರ್ಣ ಪ್ಯಾಕೇಜ್‌ನಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದರಿಂದ ಖುಷಿಯಾಗಿದೆ. ಹುಲಿ ಶಿವನ ಪಾತ್ರ ಮಾಡುವುದು ಮತ್ತು ಹುಲಿವೇಷ ಹಾಕುವುದು ನನಗೆ ಸವಾಲಾಗಿತ್ತು. ನಿರ್ದೇಶಕ ವಿಜಯ್ ಈ ಪಾತ್ರವನ್ನು ಜೀವಂತಿಕೆಯಿಂದ ನಿರ್ವಹಿಸಲು ಸಹಾಯ ಮಾಡಿದರು. ವೂಟ್ ಸೆಲೆಕ್ಟ್ನಲ್ಲಿ ಚಲನಚಿತ್ರ ಒಟಿಟಿ ಮೂಲಕ ಬಿಡುಗಡೆ ಆಗುತ್ತಿದ್ದು, ನಾನು ಬಹಳ ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.
ನಟ ಡಾಲಿ ಧನಂಜಯ್ ಮಾತನಾಡಿ, ಈ ಸಿನಿಮಾ ಮತ್ತು ನನ್ನ ಪಾತ್ರ ನನ್ನ ಹೃದಯಕ್ಕೆ ತುಂಬಾ ಹತ್ತಿರವಾಗಿವೆ. ನಾನು ಶಿವರಾಜ್‌ಕುಮಾರ್ ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ನಟಿಸಲು ಮತ್ತೆ ಅವಕಾಶ ಸಿಕ್ಕಿದ್ದು ನನಗೆ ಸಿಕ್ಕ ಅತಿ ದೊಡ್ಡ ಗೌರವವಾಗಿದೆ. ಶಿವಣ್ಣ ಮತ್ತು ವಿಜಯ್ ಅವರಂತಹ ದಿಗ್ಗಜರೊಂದಿಗೆ ಕೆಲಸ ಮಾಡುವ ಕನಸು ನನಸಾಗಿದೆ. ಪ್ರತಿ ದೃಶ್ಯವೂ ಅದ್ಭುತವಾಗಿದೆ. ವೂಟ್ ಸೆಲೆಕ್ಟ್ನಲ್ಲಿ ಚಿತ್ರದ ಬಗ್ಗೆ ಪ್ರೇಕ್ಷಕರ ಪ್ರತಿಕ್ರಿಯೆ ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.