'ಬೈರಾಗಿ'....ಶೀರ್ಷಿಕೆಯಿಂದಲೇ ಚಂದನವನದಲ್ಲಿ ಸಖತ್ ಸೌಂಡ್ ಮಾಡುತ್ತಿದೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 123ನೇ ಚಿತ್ರ. ಭಜರಂಗಿ 2 ಸಿನಿಮಾ ಆದಮೇಲೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಮೇಲೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಜುಲೈ 1ಕ್ಕೆ ವಿಶ್ವದಾದ್ಯಂತ ಬಿಡುಗಡೆಯಾಗಲು ಸಜ್ಜಾಗಿರುವ ಬೈರಾಗಿ ಸಿನಿಮಾದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಶಿವಣ್ಣನ ಹುಲಿ ಶೈಲಿಯ ಮುಖ ಹಾಗೂ ಡಿಫ್ರೆಂಟ್ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆಯುತ್ತಿದೆ.
ಟಗರು ಯಶಸ್ಸಿನ ಬಳಿಕ ಶಿವರಾಜ್ ಕುಮಾರ್ ಹಾಗೂ ಡಾಲಿ ಧನಂಜಯ್ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವ ಸಿನಿಮಾ ಇದಾಗಿರುವುದರಿಂದ ಪ್ರಾರಂಭದಿಂದಲೇ ನಿರೀಕ್ಷೆ ಗರಿಗೆದರಿದೆ. ಇಬ್ಬರೂ ಬೇರೆ ಬೇರೆ ಗೆಟಪ್ ಮೂಲಕ ಮೋಡಿ ಮಾಡಲಿದ್ದಾರೆ. ಈಗಾಗಲೇ ಅಧಿಕೃತವಾಗಿ ಬಿಡುಗಡೆಯಾಗಿರುವ ಶಿವಣ್ಣನ ಹುಲಿ ವೇಷದ ಗೆಟಪ್ ಎಲ್ಲೆಡೆ ವೈರಲ್ ಆಗಿದ್ದು, ಆಟೋ ಹಾಗೂ ಕಾರುಗಳ ಮೇಲೆ ಶಿವಣ್ಣನ ಪೋಸ್ಟರ್ ರಾರಾಜಿಸುತ್ತಿವೆ.
ಅಂಜಲಿ ಚಿತ್ರದ ನಾಯಕಿ. ದಿಯಾ ಖ್ಯಾತಿಯ ಪೃಥ್ವಿ ಅಂಬರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ. ಹಿರಿಯ ನಟ ಶಶಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಅನು ಪ್ರಭಾಕರ್, ಯಶ ಶಿವಕುಮಾರ್, ಚಿಕ್ಕಣ್ಣ ಹೀಗೆ ದೊಡ್ಡ ತಾರಾ ಬಳಗ ಈ ಚಿತ್ರದಲ್ಲಿದೆ.