ರೋರಿಂಗ್ ಸ್ಟಾರ್ ಜನಪ್ರಿಯತೆಯ ಶ್ರೀಮುರಳಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಉಗ್ರಂ ಸ್ಟಾರ್ಗೆ ಕಟುಂಬ ಸದಸ್ಯರು, ಸ್ನೇಹಿತರು, ಚಿತ್ರರಂಗದ ಗಣ್ಯರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಈ ವಿಶೇಷ ದಿನದಂದು ನಟನ ಮುಂದಿನ ಚಿತ್ರದ ಟೀಸರ್ ಅನಾವರಣಗೊಂಡಿದೆ.
ರೋರಿಂಗ್ ಸ್ಟಾರ್ ಶ್ರೀಮುರಳಿ:ಸುಮಾರು 2003ರಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ತಮ್ಮದೇ ಆದ ಸ್ಟಾರ್ ಡಮ್ ಸಂಪಾದಿಸಿದ್ದಾರೆ. ಅಭಿಮಾನಿಗಳ ಸಂಖ್ಯೆ ಕೂಡ ಹೆಚ್ಚಿದೆ. 2014ರಲ್ಲಿ ಬಂದ ಉಗ್ರಂ ಸದಾ ನೆನಪಿನಲ್ಲಿ ಉಳಿಯೋವಂಥ ಚಿತ್ರ. ಈ ಸಿನಿಮಾ ನಟನಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು. ರೋರಿಂಗ್ ಸ್ಟಾರ್ ಎಂದೇ ಜನಪ್ರಿಯರು ನೋಡಿ. ಹಾಗಾಗಿ ನಟನ ಮುಂದಿನ ಚಿತ್ರಗಳ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.
ಶ್ರೀಮುರಳಿ ಬರ್ತ್ಡೇಗೆ 'ಬಘೀರ' ಟೀಸರ್ ಗಿಫ್ಟ್: 2020ರಲ್ಲಿ ಮದಗಜ ಅನ್ನೋ ಸಿನಿಮಾ ಮೂಡಿಬಂತು. ಅದಾದ ಬಳಿಕ ಯಾವುದೇ ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಮುಂದಿನ ಸಿನಿಮಾ ಯಾವಾಗ ರಿಲೀಸ್ ಅನ್ನೋದು ಅಭಿಮಾನಿ ಬಳಗದ ಪ್ರಶ್ನೆ. ಬಹುನಿರೀಕ್ಷಿತ 'ಬಘೀರ' ಸಿನಿಮಾದಲ್ಲಿ ನಟಿಸುತ್ತಿರೋದು ನಿಮಗೆಲ್ಲರಿಗೂ ತಿಳಿದಿರೋ ವಿಚಾರವೇ. ಇಂದು ನಟನ ಜನ್ಮದಿನ ಆದ ಹಿನ್ನೆಲೆ ದಕ್ಷಿಣದ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಆಗಿರೋ ಹೊಂಬಾಳೆ ಫಿಲ್ಮ್ಸ್ 'ಬಘೀರ' ಟೀಸರ್ ಗಿಫ್ಟ್ ಕೊಟ್ಟಿದೆ. ಸೋಷಿಯಲ್ ಮೀಡಿಯಾಗಳಲ್ಲಿ ಟೀಸರ್ ಅನಾವರಣಗೊಳಿಸಿ ಶ್ರೀಮುರಳಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದೆ.