ರೋಮಿಯೋ, ಅರ್ಜುನ್, ಚಡ್ಡಿದೋಸ್ತ್ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ವಿಭಿನ್ನ ಮೇಕಿಂಗ್ ಸ್ಟೈಲ್ ಹೊಂದಿರುವ ನಿರ್ದೇಶಕ ಪಿ.ಸಿ ಶೇಖರ್. ಲವ್ ಬರ್ಡ್ಸ್ ಚಿತ್ರದ ಬಳಿಕ ಪಿ.ಸಿ ಶೇಖರ್ ಅವರು ಪ್ರಯೋಗಾತ್ಮಕ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದು ಪಿ.ಸಿ ಶೇಖರ್ ನಿರ್ದೇಶನದ ಹತ್ತನೇ ಸಿನಿಮಾ. ಈ ಚಿತ್ರಕ್ಕೆ 'BAD' ಅಂತಾ ಶೀರ್ಷಿಕೆ ಇಡಲಾಗಿದ್ದು, ಪ್ರೀತಿಯ ರಾಯಭಾರಿ ಸಿನಿಮಾ ನಟ ನಕುಲ್ ಗೌಡ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯ BAD ಚಿತ್ರದ ಫಸ್ಟ್ ಲಕ್ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಅನಾವರಣ ಮಾಡುವ ಮುಖಾಂತರ ಈ ಸಿನಿಮಾಗೆ ಸಾಥ್ ನೀಡಿದ್ದಾರೆ.
BAD ಸಿನಿಮಾ ಫಸ್ಟ್ ಲಕ್ ಅನಾವರಣಗೊಳಿಸಿದ ಗಣೇಶ್ ಇದು ನಾಯಕ ಪ್ರಧಾನ ಸಿನಿಮಾ ಅಲ್ಲ. ಬದಲಿಗೆ ಆರು ಪ್ರಮುಖ ಪಾತ್ರಗಳಿವೆ. ಮನುಷ್ಯನಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಎಂಬ ಅರಿಷಡ್ವರ್ಗಗಳಿರುತ್ತವೆ. ಈ ಆರು ಅರಿಷಡ್ವರ್ಗಗಳನ್ನು ನಮ್ಮ ಚಿತ್ರದ ಆರು ಪಾತ್ರಗಳು ಪ್ರತಿನಿಧಿಸುತ್ತವೆ. ಆ ಪೈಕಿ "ಕ್ರೋಧ"ವನ್ನು ಪ್ರತಿನಿಧಿಸುತ್ತಿರುವ ನಕುಲ್ ಗೌಡ ಅವರ ಫಸ್ಟ್ ಲುಕ್ ಪೋಸ್ಟರ್ ಇಂದು ಬಿಡುಗಡೆ ಆಗಿದೆ.
ಸಾಮಾನ್ಯವಾಗಿ "ಕ್ರೋಧ" ವನ್ನು ಕಿರುಚುವುದು, ಅರಚುವುದು ಸೇರಿದಂತೆ ಮೊದಲಾದ ವಿಚಿತ್ರ ರೀತಿಗಳಿಂದ ತೋರಿಸುತ್ತಾರೆ. ನಾವು ಮುಖದ ಹಾವಭಾವದಲ್ಲಿ "ಕ್ರೋಧ" ವನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಚಿತ್ರೀಕರಣ ಮುಕ್ತಾಯ ಹಂತ ತಲುಪಿದೆ ಎಂದು ನಿರ್ದೇಶಕ ಪಿ.ಸಿ ಶೇಖರ್ ತಿಳಿಸಿದ್ದಾರೆ.
ಇದೊಂದು ವಿಭಿನ್ನ ಕಥೆಯ ಚಿತ್ರ ಎಂದು ತಿಳಿಸಿರುವ ಮುಖ್ಯ ಪಾತ್ರಧಾರಿ ನಕುಲ್, ನನ್ನದು ಈ ಚಿತ್ರದಲ್ಲಿ ಕ್ರೋಧವನ್ನು ಪ್ರತಿನಿಧಿಸುವ ಪಾತ್ರ. ಕ್ರೋಧವನ್ನು ನಮ್ಮ ಸಿನಿಮಾದಲ್ಲಿ ಭೀಕರವಾಗಿ ತೋರಿಸಿಲ್ಲ. ನಿರ್ದೇಶಕ ಪಿ.ಸಿ ಶೇಖರ್ ಉತ್ತಮವಾದ ಕಥೆ ಮಾಡಿದ್ದಾರೆ. ಚಿತ್ರಕಥೆ ಸಿನಿಮಾ ಹೈಲೆಟ್ ಎಂದರೆ ತಪ್ಪಾಗಲಾರದು. ಬಹುತೇಕ ಭಾಗದ ಚಿತ್ರೀಕರಣ ಸೆಟ್ನಲ್ಲೇ ನಡೆದಿರುವುದು ವಿಶೇಷ ಎಂದು ತಿಳಿಸಿದರು.
ಇದನ್ನೂ ಓದಿ:'ಭೇಟಿಯಾಗೋಣ, ಬನ್ನಿ..': ಫ್ಯಾನ್ಸ್ ಜೊತೆ ರಿಷಬ್ ಶೆಟ್ಟಿ ಜನ್ಮದಿನಾಚರಣೆ! ಎಲ್ಲಿ? ಯಾವಾಗ? ಇಲ್ಲಿದೆ ಮಾಹಿತಿ..
BAD ಸಿನಿಮಾದಲ್ಲಿ ನಕುಲ್ ಗೌಡ ಜೊತೆಗೆ ಮಾನ್ವಿತ ಹರೀಶ್, ಸಾಯಿ ಕೃಷ್ಣ, ಅಪೂರ್ವ ಭಾರದ್ವಾಜ್, ಮಂಜುನಾಥ್, ಅಶ್ವಿನಿ ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ಪಿ.ಸಿ. ಶೇಖರ್ ಸಂಕಲನ ಹಾಗೂ ಶಕ್ತಿ ಶೇಖರ್ ಅವರ ಛಾಯಾಗ್ರಹಣವಿದೆ. ಸಚಿನ್ ಬಿ ಹೊಳಗುಂಡಿ ಸಂಭಾಷಣೆ ಬರೆದಿದ್ದಾರೆ. ಜಿ. ರಾಜಶೇಖರ್ ಅವರ ಕಲಾ ನಿರ್ದೇಶನ "BAD" ಚಿತ್ರಕ್ಕಿದೆ. ಎಸ್.ಆರ್ ವೆಂಕಟೇಶ್ ಗೌಡ ನಿರ್ಮಾಣದ " BAD" ಚಿತ್ರದಲ್ಲಿ ರೋಷಮಾನ್ ಎಫೆಕ್ಟ್ ಎಂಬ ವಿಶೇಷ ವಿಧಾನವನ್ನು ಬಳಸಿಕೊಳ್ಳಲಾಗಿದೆ. ಸದ್ಯ ಫಸ್ಟ್ ಲುಕ್ ನಿಂದ ಗಮನ ಸೆಳೆಯುತ್ತಿರುವ BAD ಸಿನಿಮಾ ಈ ವರ್ಷದಲ್ಲೇ ಪ್ರೇಕ್ಷಕರ ಮುಂದೆ ಬರಲಿದೆ.
ಇದನ್ನೂ ಓದಿ:ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಬಿಡುಗಡೆಗೆ ಸಜ್ಜು: ರಣ್ವೀರ್ ಸಿಂಗ್ ಹಿಟ್ ಸಿನಿಮಾಗಳ್ಯಾವುವು ಗೊತ್ತಾ?