7 ವರ್ಷಗಳ ಹಿಂದೆ ಕನ್ನಡದಲ್ಲಿ ಬ್ಲಾಕ್ಬಸ್ಟರ್ ಹಿಟ್ ಪಡೆದು, ಇತರೆ ಭಾಷೆಗಳಿಗೂ ಡಬ್ ಆಗಿ ಮೆಚ್ಚುಗೆ ಪಡೆದ ಸಿನಿಮಾ 'ಕಿರಿಕ್ ಪಾರ್ಟಿ'. ಈ ಭರ್ಜರಿ ಯಶಸ್ಸಿನ ಬಳಿಕ ಇಡೀ ತಂಡ ಬೇರೆ ಬೇರೆ ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದೆ. ರಿಷಬ್ ಶೆಟ್ಟಿ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ಆ ರೀತಿಯ ಯೂಥ್ ಕಾಮಿಡಿ ಸಿನಿಮಾ ಮತ್ತೊಂದು ಬರಲಿಲ್ಲವಲ್ಲ ಎಂಬ ಕೊರಗು ನೀಗಿಸಲು ಮತ್ತದೇ ಬರಹಗಾರರ ತಂಡ ಸಜ್ಜಾಗಿದೆ. ಅವರೀಗ 'ಬ್ಯಾಚುಲರ್ ಪಾರ್ಟಿ'ಗೆ ಅಣಿಯಾಗಿದ್ದಾರೆ ಎಂಬುದು ವಿಶೇಷ.
ಕೆಲವು ದಿನಗಳ ಹಿಂದೆ 'ಬ್ಯಾಚುಲರ್ ಪಾರ್ಟಿ'ಯ ಮೊದಲ ಝಲಕ್ ಅನ್ನು ಚಿತ್ರತಂಡ ಬಿಡುಗಡೆಗೊಳಿಸಿತ್ತು. ಇದೀಗ ಚಿತ್ರದ ಗ್ಲಿಂಪ್ಸ್ ಜೊತೆಗೆ ಬಿಡುಗಡೆ ದಿನಾಂಕ ಕೂಡ ಘೋಷಣೆಯಾಗಿದೆ. 2024ರ ಜನವರಿ 26 ಗಣರಾಜ್ಯೋತ್ಸವ ದಿನದಂದು ಫ್ಯಾನ್ಸ್ಗೆ ಪಾರ್ಟಿ ನೀಡಲು ತಂಡ ಮುಂದಾಗಿದೆ. ನಿರ್ಮಾಣ ಸಂಸ್ಥೆ ಪರಂವಃ ಸ್ಟುಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, 'ಎಲ್ರೂ ಇಲ್ ಕೇಳಿ, ಇಲ್ ಕೇಳಿ! ಒಂದ್ ನಿಮಿಷ.. ಸೈಲೆನ್ಸ್.. ಒಂದ್ ನಿಮಿಷ!! ಪಾರ್ಟಿಗೆ ಹೋಗ್ತಿದ್ದೀವಿ, ನಿಮ್ಮೆಲ್ಲರನ್ನ ಬಿಟ್ಟು ಹೋಗೋದಿಕ್ಕಾಗತ್ತ? ಜನವರಿ 26ರಂದು ಸಿನಿಮಾ ಬ್ಯಾಚುಲರ್ ಪಾರ್ಟಿ ಬಿಡುಗಡೆ' ಎಂದು ತಿಳಿಸಿದೆ.
ಚಿತ್ರತಂಡ:'ಕಿರಿಕ್ ಪಾರ್ಟಿ' ಬರಹಗಾರ ಅಭಿಜಿತ್ ಮಹೇಶ್ ಅವರು ಈಗಾಗಲೇ ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಿರ್ದೇಶಕರಾಗಿ ಬಡ್ತಿ ಪಡೆದಿದ್ದು, ಬ್ಯಾಚುಲರ್ ಪಾರ್ಟಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಕಚಗುಳಿ ಇಡುವ ಸಂಭಾಷಣೆಗೆ ಖ್ಯಾತರಾಗಿರುವ ಅಭಿಜಿತ್, ತಮ್ಮ ಮೊದಲ ಸಿನಿಮಾಗೆ ಸಂಭಾಷಣೆ ಮತ್ತು ಕಥೆ-ಚಿತ್ರಕಥೆಯನ್ನು ತಾವೇ ಬರೆದಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಪರಂವಃ ಸ್ಟುಡಿಯೋ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ. ಇವರಿಗೆ ಅಮಿತ್ ಗುಪ್ತಾ ಸಾಥ್ ನೀಡಿದ್ದಾರೆ.
ಅರವಿಂದ್ ಎಸ್.ಕಶ್ಯಪ್ ಛಾಯಾಗ್ರಹಣ, ಅರ್ಜುನ್ ರಾಮು ಸಂಗೀತ, ಉಲ್ಲಾಸ್ ಹೈದೂರ್ ಕಲಾ ವಿನ್ಯಾಸ, ಅಭಿಷೇಕ್.ಎಂ ಸಂಕಲನ, ಅರುಂಧತಿ ಅಂಜನಪ್ಪ ವಸ್ತ್ರ ವಿನ್ಯಾಸ, ಅರ್ಜುನ್ ರಾಜ್ ಸಾಹಸ ನಿರ್ದೇಶನ, ವೀರೇಶ್ ಶಿವಮೂರ್ತಿ, ಚಂದ್ರಜಿತ್ ಬೆಳ್ಳಿಯಪ್ಪ, ನಾಗಾರ್ಜುನ್ ಶರ್ಮಾ ಸಾಹಿತ್ಯ, ಭೂಷಣ್, ದೀಕ್ಷಿತ್ ಕುಮಾರ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ. ದೂದ್ ಪೇಡಾ ಖ್ಯಾತಿಯ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತರರಾಗಿದ್ದಾರೆ.
ಇದನ್ನೂ ಓದಿ:ಕಿರಿಕ್ ಪಾರ್ಟಿ ಬಳಿಕ ಬ್ಯಾಚುಲರ್ ಪಾರ್ಟಿ: ಈ ಸಲ ಪಾರ್ಟಿ ಜೋರು! ಅಂತಿದ್ದಾರೆ ರಕ್ಷಿತ್ ಶೆಟ್ಟಿ ಟೀಮ್