'ಬ್ಯಾಚುಲರ್ ಪಾರ್ಟಿ' - ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಕುತೂಹಲ ಹುಟ್ಟಿಸಿರೋ ಚಿತ್ರ. ದೂದ್ ಪೇಡಾ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಹಿರಿಯ ನಟ ಅಚ್ಯುತ್ ಕುಮಾರ್ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರಕ್ಕೆ ಅಭಿಜಿತ್ ಮಹೇಶ್ ಆ್ಯಕ್ಷನ್ ಕಟ್ ಹೇಳಿದ್ದಾರೆ. 2024ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರೋ 'ಬ್ಯಾಚುಲರ್ ಪಾರ್ಟಿ'ಯ ಟ್ರೇಲರ್ ರಿಲೀಸ್ ಈವೆಂಟ್ ಮಂಗಳವಾರ ನಡೆಯಿತು. ಪಂಚಿಂಗ್ ಡೈಲಾಗ್ಸ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಸಿನಿಮಾದ ಅನುಭವವನ್ನು ಚಿತ್ರತಂಡ ಹಂಚಿಕೊಂಡಿದೆ.
ಬ್ಯಾಚುಲರ್ ಪಾರ್ಟಿ ಚಿತ್ರತಂಡ ನಿರ್ದೇಶಕ ಅಭಿಜಿತ್ ಮಹೇಶ್ ಮಾತನಾಡಿ, ''ಲಾಕ್ಡೌನ್ ಸಮಯದಲ್ಲಿ ಈ ಸಿನಿಮಾದ ಕಥೆ ಹುಟ್ಟಿತು. ಇದೊಂದು ಪಕ್ಕಾ ಎಂಟರ್ಟೈನರ್ ಸಿನಿಮಾ. ಪ್ರೇಕ್ಷಕರು ಕೊಡುವ ದುಡ್ಡಿಗೆ ಖಂಡಿತ ಮೋಸ ಆಗುವುದಿಲ್ಲ. ಆ್ಯಕ್ಷನ್ ಕಟ್ ಹೇಳಲು ಅವಕಾಶ ನೀಡಿದ ರಕ್ಷಿತ್ ಶೆಟ್ಟಿ ಅವರಿಗೆ ಹಾಗೂ ಇಡೀ ತಂಡಕ್ಕೆ ಧನ್ಯವಾದಗಳು'' ಎಂದು ತಿಳಿಸಿದರು.
ಬ್ಯಾಚುಲರ್ ಪಾರ್ಟಿಟ್ರೇಲರ್ ರಿಲೀಸ್ ಈವೆಂಟ್ ಲೂಸ್ ಮಾದ ಯೋಗಿ ಮಾತನಾಡಿ, ''ನನ್ನ ಪಾತ್ರವನ್ನು ರಿಷಬ್ ಶೆಟ್ಟಿ ಅವರು ಮಾಡಬೇಕಿತ್ತು. 'ಕಾಂತಾರ'ದಲ್ಲಿ ಬ್ಯುಸಿಯಾದ ಕಾರಣ ನಾನು ಈ ಚಿತ್ರದಲ್ಲಿ ನಟಿಸಿದ್ದೇನೆ. ಪಾತ್ರ ತುಂಬಾ ಚೆನ್ನಾಗಿದೆ. ನಾನು ಹಾಗೂ ದಿಗಂತ್ 15 ವರ್ಷಗಳ ಸ್ನೇಹಿತರು. ಆದರೆ ಒಂದು ಚಿತ್ರದಲ್ಲೂ ಒಟ್ಟಿಗೆ ನಟಿಸಿರಲಿಲ್ಲ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದು, ಖುಷಿಯಾಗಿದೆ'' ಎಂದು ತಿಳಿಸಿದರು.
ದೂದ್ ಪೇಡಾ ದಿಗಂತ್ ಮಾತನಾಡಿ, ''ಪರಂವಃ ಸ್ಟುಡಿಯೋಸ್ ಅಡಿ ಇದು ನನ್ನ ಎರಡನೇ ಚಿತ್ರ. ಯೋಗಿ ಹಾಗೂ ನಾನು ಒಟ್ಟಿಗೆ ನಟಿಸಿರುವ ಮೊದಲ ಚಿತ್ರ. ಅಭಿಜಿತ್ ಮಹೇಶ್ ಅವರ ನಿರ್ದೇಶನದಲ್ಲಿ ಚಿತ್ರ ತುಂಬಾ ಚೆನ್ನಾಗಿ ಮೂಡಿಬಂದಿದೆ. ಚಿತ್ರೀಕರಣದ ಸಮಯ ಬಹಳ ಸಂತಸಮಯವಾಗಿತ್ತು'' ಎಂದರು.
ಬಳಿಕ ಅಚ್ಯುತ್ ಕುಮಾರ್ ಮಾತನಾಡಿ, ''ಬೆಂಗಳೂರು ಅಷ್ಟೇ ಅಲ್ಲದೇ, ಥೈಲ್ಯಾಂಡ್, ಬ್ಯಾಂಕಾಕ್ನಲ್ಲೂ ಹೆಚ್ಚಿನ ಚಿತ್ರೀಕರಣವಾಗಿದೆ. ನಾನು, ಯೋಗಿ ಹಾಗೂ ದಿಗಂತ್ ಅಲ್ಲಿನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದೆವು. ಆ ಇಬ್ಬರೂ ಒಳ್ಳೆಯ ನಟರು. ಅಭಿಜಿತ್ ಅವರು ಪ್ರತಿಭಾವಂತ ನಿರ್ದೇಶಕ. ಎಲ್ಲರೂ ನಮ್ಮ ಬ್ಯಾಚುಲರ್ ಪಾರ್ಟಿ ವೀಕ್ಷಿಸಿ, ಪ್ರೋತ್ಸಾಹ ನೀಡಿ'' ಎಂದರು.
ಇದನ್ನೂ ಓದಿ:'12th ಫೇಲ್' ಸಿನಿಮಾ ಹೊಗಳಿದ ದೀಪಿಕಾ ಪಡುಕೋಣೆ
ಬ್ಯಾಚುಲರ್ ಪಾರ್ಟಿ ನಿರ್ಮಾಣ ಮಾಡಿರೋ ರಕ್ಷಿತ್ ಶೆಟ್ಟಿ ಮಾತನಾಡಿ, ನಾನು ಕಿರುಚಿತ್ರ ಮಾಡುತ್ತಿದ್ದ ಸಮಯದಲ್ಲಿ ನನಗೆ ಅಭಿಜಿತ್ ಮಹೇಶ್ ಪರಿಚಯರಾದರು. ಕಿರಿಕ್ ಪಾರ್ಟಿ, ಅವನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಒನ್ ಲೈನ್ ಪಂಚಿಂಗ್ ಡೈಲಾಗ್ಸ್ ಅಭಿಜಿತ್ ಅವರ ಕೊಡುಗೆ. ಅಂತಹ ಅದ್ಭುತ ಪ್ರತಿಭೆ ಅವರು. ಆಗಿನಿಂದಲೂ ನಾನು ಅಭಿಜಿತ್ ಅವರಿಗೆ ನಿರ್ದೇಶನ ಮಾಡಲು ಹೇಳುತ್ತಿದ್ದೆ. ಇದೀಗ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇನ್ನೂ ದಿಗಂತ್ ಹಾಗೂ ಯೋಗಿ ಇಬ್ಬರು ಅದ್ಭುತ ಕಲಾವಿದರು. ನಾನು ಅವರಿಬ್ಬರ ಚಿತ್ರಗಳನ್ನು ನೋಡಿ ಬಹಳ ಇಷ್ಟಪಟ್ಟಿದ್ದೇನೆ. ಈ ಚಿತ್ರದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ:ಗದಗ ಕಟೌಟ್ ದುರಂತ: ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಿದ ಯಶ್ ತಂಡ
ಇನ್ನೂ ಚಿತ್ರದಲ್ಲಿ ಸಿರಿ ರವಿಕುಮಾರ್ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅರ್ಜುನ್ ರಾಮ್ ಸಂಗೀತ ನೀಡಿದ್ದಾರೆ. ಅರವಿಂದ್ ಕಶ್ಯಪ್ ಕ್ಯಾಮರಾ ಹ್ಯಾಂಡಲ್ ಮಾಡಿದ್ದಾರೆ. ಕಾಸ್ಟ್ಯೂಮ್ ಡಿಸೈನರ್ ಆಗಿ ಅರುಂಧತಿ ಕೆಲಸ ಮಾಡಿದ್ದಾರೆ. ಚಿತ್ರತಂಡದವರು ಸೇರಿ ಪರಂವಃ ಸಂಸ್ಥೆಯ ಸಿಇಓ ಶ್ರೀನಿ ಶೆಟ್ಟಿ ಈವೆಂಟ್ನಲ್ಲಿ ಉಪಸ್ಥಿತರಿದ್ದರು. ಪರಂವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ ಎಸ್ ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ನಿರ್ಮಾಣ ಮಾಡಿರೋ ಬ್ಯಾಚುಲರ್ ಪಾರ್ಟಿ ಇದೇ ಜನವರಿ 26ರಂದು ರಾಜ್ಯಾದ್ಯಂತ ಬಿಡುಗಡೆ ಆಗಲಿದೆ. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಶುಭವಾಗುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.