ಅಪ್ರತಿಮ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಕಲ್ಪನೆಯಲ್ಲಿ ಮೂಡಿಬಂದ ಅವತಾರ್: ದಿ ವೇ ಆಫ್ ವಾಟರ್ ಸಿನಿಮಾ ವಿಶ್ವ ಸಿನಿರಸಿಕರ ಮನಸೂರೆಗೊಂಡಿದೆ. 3 ಡಿಯಲ್ಲಿ ಬಿಡುಗಡೆಯಾಗಿ ಕೋಟ್ಯಂತರ ರೂಪಾಯಿ ಗಳಿಸಿದ್ದ ಚಿತ್ರ ಇದೀಗ ಒಟಿಟಿಗೂ(OTT) ಕಾಲಿಟ್ಟಿದೆ.
ಜಾಗತಿಕವಾಗಿ ಧೂಳೆಬ್ಬಿಸಿದ್ದ ಅವತಾರ್-2 ಸಿನಿಮಾ ಚಿತ್ರಮಂದಿರಗಳಲ್ಲಿ 3ಡಿ ಯಲ್ಲಿ ಬಿಡುಗಡೆಯಾಗಿತ್ತು. ಆಕರ್ಷಕ ಕ್ಯಾಮರಾ, ಸ್ಕ್ರೀನ್ಪ್ಲೇ ಚಿತ್ರವನ್ನು ಶ್ರೀಮಂತಗೊಳಿಸಿದೆ. ಕಣ್ಣಿಗೆ ಕಟ್ಟುವಂತೆ ದೃಶ್ಯಗಳನ್ನು ಹಾಲಿವುಡ್ ನಿರ್ದೇಶಕ ಕ್ಯಾಮರೂನ್ ಚಿತ್ರಿಸಿದ್ದಾರೆ. ಯಶಸ್ವಿ ಸಿನಿಮಾವೀಗ ಒಟಿಟಿ ವೇದಿಕೆಗೆ ಲಗ್ಗೆ ಇಟ್ಟಿದ್ದು, ಜನರು ಈಗ ಮನೆಯಲ್ಲೇ ಕುಳಿತು ವೀಕ್ಷಿಸಬಹುದು.
ಅವತಾರ್: ದಿ ವೇ ಆಫ್ ವಾಟರ್ ಸಿನಿಮಾ ಮಾರ್ಚ್ 28 ರಿಂದ ಒಟಿಟಿ ಚರಣ ಆರಂಭಿಸಿದೆ. ಕೇವಲ ಒಂದೇ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುವ ಬದಲಿಗೆ ಇದು, ಅಮೆಜಾನ್ ಪ್ರೈಮ್ ವಿಡಿಯೋ, ಆ್ಯಪಲ್ ಟಿವಿ, ವುಡು(ಅಮೆರಿಕದ ಜನಪ್ರಿಯ ಸ್ಟ್ರೀಮಿಂಗ್ ಆ್ಯಪ್) ಮತ್ತು ಮೂವಿಸ್ ಎನಿವೇರ್ ಒಟಿಟಿಯಲ್ಲಿ ಸಿನಿಮಾ ಲಭ್ಯವಿದೆ. ಈ ನಾಲ್ಕು ಒಟಿಟಿ ವೇದಿಕೆಗಳು ಸಿನಿಮಾದ ಪ್ರಸಾರ ಹಕ್ಕನ್ನು ಖರೀದಿ ಮಾಡಿವೆ. ವಿಶೇಷ ಅಂದರೆ ಈ ಸಿನಿಮಾ 4ಕೆ ಅಲ್ಟ್ರಾ ಎಚ್ಡಿ ಗುಣಮಟ್ಟದಲ್ಲಿ ಡಾಲ್ಬಿ ಆಡಿಯೋದಲ್ಲಿ ಲಭ್ಯವಿದೆ.
ಅಮೆಜಾನ್ನಲ್ಲಿ ನೋಡಬಹುದೇ?:ಅಮೆಜಾನ್ ಪ್ರೈಮ್ನಲ್ಲಿ ಸಿನಿಮಾ ಸ್ಟ್ರೀಮಿಂಗ್ಗೆ ಲಭ್ಯವಿದ್ದರೂ, ಅದು ಸಾಮಾನ್ಯ ಚಂದಾದಾರಿಕೆಗೆ ಸಿಗುವುದಿಲ್ಲ. ನೀವು ಪ್ರೈಮ್ ಚಂದಾದಾರರಾಗಿದ್ದರೆ, ಈ ಸಿನಿಮಾವನ್ನು ಅಲ್ಲಿ ನೋಡಲು ಆಗಲ್ಲ. ಕಾರಣ ಇದಕ್ಕೆ ಹಣ ಪಾವತಿ ಮಾಡಬೇಕಿದೆ. ರೆಂಟಲ್ ನೀಡಿದ್ದರೆ ಮಾತ್ರ ಸಿನಿಮಾ ನೋಡಲು ಸಿಗುತ್ತದೆ. ಸದ್ಯಕ್ಕೆ ಸಿನಿಮಾ ಉಚಿತವಾಗಿ ಲಭ್ಯವಿಲ್ಲ.
ಭಾರತದಲ್ಲಿ ಅವತಾರ್:ಹಾಲಿವುಡ್ ಸಿನಿಮಾ ಅವತಾರ್: ದಿ ವೇ ಆಫ್ ವಾಟರ್ ಸಿನಿಮಾ ಇಂಗ್ಲಿಷ್ ಮಾತ್ರವಲ್ಲದೇ ಭಾರತದ ಹಲವು ಭಾಷೆಗಳಲ್ಲಿ ಅದು ಡಬ್ ಆಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ದೇಶದಲ್ಲಿಯೇ ನೂರಾರು ಕೋಟಿ ರೂಪಾಯಿ ವ್ಯವಹಾರ ನಡೆಸಿದೆ. ಚಿತ್ರದಲ್ಲಿ ಕೇಟ್ ವಿನ್ಸ್ಲೆಟ್, ಸ್ಯಾಮ್ ವರ್ತಿಂಗ್ಟನ್, ಜೊಯ್ ಸಲ್ಡಾನಾ, ಸಿಗೌರ್ನಿ ವೀವರ್ ಮತ್ತು ಸ್ಟೀಫನ್ ಲ್ಯಾಂಗ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಜೀವ ತುಂಬಿದ್ದಾರೆ.
ಸಿನಿಮಾ ಕಥೆ ಏನು?:ಅವತಾರ್ ಮೊದಲ ಅವತರಣಿಕೆ 2009ರಲ್ಲಿ ತೆರೆಕಂಡು ವಿಶ್ವಾದ್ಯಂತ ಧೂಳೆಬ್ಬಿಸಿದ ಜೇಮ್ಸ್ ಕ್ಯಾಮರೂನ್ ಅವರ ಚಿತ್ರ. ಭೂಮಿಯಂತೆ ಕಾಣುವ ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ ವಿಶೇಷ ಜಲಚರಗಳ ಕಥೆ ಇದರಲ್ಲಿದೆ. ಪರದೆ ಮೇಲೆ ಬರುವ ಒಂದೊಂದು ದೃಶ್ಯವೂ ಕೂಡ ರೋಮಾಂಚನಕಾರಿಯಾಗಿದೆ. ಅದರ ಮುಂದುವರಿದ ಭಾಗ ಅವತಾರ್ 2. 2009ರಲ್ಲಿ ಬಿಡುಗಡೆಯಾದ ಮೊದಲ 'ಅವತಾರ್' ಚಿತ್ರವು 162 ನಿಮಿಷಗಳ ಅವಧಿ ಹೊಂದಿತ್ತು. ಅಂದರೆ 2 ಗಂಟೆ 42 ನಿಮಿಷಗಳು. 'ಅವತಾರ್ 2' ಅವಧಿಯು 192 ನಿಮಿಷಗಳು, 10 ಸೆಕೆಂಡುಗಳು. ಅಂದರೆ, 3 ಗಂಟೆ 12 ನಿಮಿಷ 10 ಸೆಕೆಂಡುಗಳಾಗಿವೆ.
ಇದನ್ನೂ ಓದಿ:ಭಾರತದಲ್ಲಿ ಹೊಸ ದಾಖಲೆ ಬರೆದ 'ಅವತಾರ್ 2': ಭರ್ಜರಿ ಕಲೆಕ್ಷನ್!, ಎಷ್ಟು ಗೊತ್ತಾ?