ಇತ್ತೀಚೆಗೆ ಅತ್ಯುತ್ತಮ ಹಾಡು ವಿಭಾಗದಲ್ಲಿ ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದ ಎಸ್ಎಸ್ ರಾಜಮೌಳಿ ನಿರ್ದೇಶನದ ಆರ್ಆರ್ಆರ್ ಇದೀಗ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ಸ್‌ನಲ್ಲಿ ಅತ್ಯುತ್ತಮ ವಿದೇಶಿ ಭಾಷಾ ಚಲನಚಿತ್ರ ಪ್ರಶಸ್ತಿ ಗೆದ್ದುಕೊಂಡಿದೆ. ಅಲ್ಲದೇ ಈ ಚಿತ್ರದ ನಾಟು ನಾಟು ಹಾಡಿಗೆ ಅತ್ಯುತ್ತಮ ಗೀತೆ ಪ್ರಶಸ್ತಿಯೂ ಲಭಿಸಿದೆ. ಆರ್ಆರ್ಆರ್ ಸಿನಿಮಾಗೆ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಸಿಕ್ಕಿರುವುದು ಮಾತ್ರವಲ್ಲದೇ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಹಾಲಿವುಡ್ನ ಹೆಸರಾಂತ ನಿರ್ದೇಶಕ, ಅವತಾರ್ ಸರಣಿ ಸಿನಿಮಾಗಳ ಖ್ಯಾತಿಯ ಜೇಮ್ಸ್ ಕ್ಯಾಮೆರಾನ್ ಅವರ ಹೊಗಳಿಕೆಯ ಮಾತುಗಳನ್ನೂ ತನ್ನದಾಗಿಸಿಕೊಂಡಿದೆ.
ಅಮೆರಿಕ ನೆಲದಲ್ಲಿ ನಡೆದ 28ನೇ ವಾರ್ಷಿಕ ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಪ್ರದಾನ ಕಾರ್ಯಕ್ರಮದಲ್ಲಿ ಆರ್ಆರ್ಆರ್ ಚಿತ್ರತಂಡ ಭಾಗವಹಿಸಿದ್ದು, ಅಲ್ಲಿ ಹಾಲಿವುಡ್ನ ಅದೆಷ್ಟೋ ಸಿನಿದಿಗ್ಗಜರೂ ಭಾಗಿಯಾಗಿದ್ದರು. ಅದರಲ್ಲಿ ಇತ್ತೀಚೆಗಷ್ಟೇ ಅವತಾರ್ ಸೀಕ್ವೆಲ್ ಬಿಡುಗಡೆ ಮಾಡಿದ್ದ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರು ತಮ್ಮ ಪತ್ನಿ ಸಮೇತರಾಗಿ ಭಾಗವಹಿಸಿದ್ದರು. ಆರ್ಆರ್ಆರ್ ಸಿನಿಮಾಗೆ ಕ್ರಿಟಿಕ್ಸ್ ಪ್ರಶಸ್ತಿ ದೊರೆತಿರುವುದಕ್ಕೆ ಅಭಿನಂದನೆ ಸಲ್ಲಿಸಿರುವ ಜೇಮ್ಸ್ ಕ್ಯಾಮೆರಾನ್, ಸಿನಿಮಾದ ಕುರಿತು 10 ನಿಮಿಷಗಳ ಕಾಲ ನಿರ್ದೇಶಕ ರಾಜಮೌಳಿ ಹಾಗೂ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ಜೊತೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಜೇಮ್ಸ್ ಕ್ಯಾಮೆರಾನ್ ಒಂದು ಬಾರಿ ಸಿನಿಮಾ ನೋಡಿರುವುದು ಮಾತ್ರವಲ್ಲದೆ ತಮ್ಮ ಹೆಂಡತಿ ಸೂಝಿ ಅವರಿಗೂ ಆರ್ಆರ್ಆರ್ ಸಿನಿಮಾ ನೋಡುವಂತೆ ಸಜೆಸ್ಟ್ ಮಾಡಿದ್ದಾರೆ. ಅವರೊಂದಿಗೆ ಕೂತು ಮತ್ತೊಂದು ಬಾರಿ ಆರ್ಆರ್ಆರ್ ಸಿನಿಮಾ ನೋಡಿದ್ದಾರೆ. ಕಾರ್ಯಕ್ರಮದಲ್ಲಿ ರಾಜಮೌಳಿ ಅವರನ್ನು ನೋಡಿದವರೆ ಹೆಂಡತಿ ಜೊತೆ ಸೇರಿ ಸಿನಿಮಾದ ಬಗ್ಗೆ ಚರ್ಚಿಸಿ ಹೊಗಳಿಕೆಯ ಮಾತುಗಳನ್ನಾಡಿದ್ದಾರೆ.
ಈ ಬಗ್ಗೆ ಪ್ರಶಸ್ತಿ ಸ್ವೀಕರಿಸಿ ತಾಯ್ನಾಡಿಗೆ ಮರಳಿರುವ ನಿರ್ದೇಶಕ ರಾಜಮೌಳಿ ಹಾಗೂ ಹಿರಿಯ ಸಂಗೀತ ನಿರ್ದೇಶಕ ಎಂ ಎಂ ಕೀರವಾಣಿ ವಿಡಿಯೋ ಹಾಗೂ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಆರ್ಆರ್ಆರ್ ಟ್ವಿಟರ್ ಪೇಜ್ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಂತೆ ನಟಿ ಆಲಿಯಾ ಭಟ್ ಅದನ್ನು ರೀಟ್ವೀಟ್ ಮಾಡಿಕೊಂಡಿದ್ದಾರೆ.