2009ರಲ್ಲಿ ತೆರೆಕಂಡ ಅವತಾರ್ ಸಿನಿಮಾ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಪರದೆ ಮೇಲೆ ಬರುವ ಒಂದೊಂದು ದೃಶ್ಯಗಳು ಕೂಡ ಬಹಳ ರೋಮಾಂಚನಕಾರಿಯಾಗಿದ್ದವು. ಇದೀಗ ಅದರ ಮುಂದುವರಿದ ಭಾಗ ಅವತಾರ್ 2 ಬಿಡುಗಡೆಗೆ ಸಜ್ಜಾಗಿದೆ. ಟಿಕೆಟ್ ದರ ಮಾತ್ರ ಎಲ್ಲರ ಹುಬ್ಬೇರುವಂತೆ ಮಾಡಿದೆ.
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ ಈ ಸಿನಿಮಾದ ಪ್ರತಿ ದೃಶ್ಯ ಕೂಡ ವೀಕ್ಷಕರನ್ನು ಬೇರೆಯದ್ದೇ ಮಾಯಾಲೋಕಕ್ಕೆ ಕೊಂಡೊಯ್ಯುವ ಅನುಭವ ಕೊಟ್ಟಿದ್ದು, ಅದರ ಮುಮದುವರಿದ ಭಾಗ ಇನ್ನೂ ಅತ್ಯದ್ಭುತವಾಗಿರಲಿದೆ ಎನ್ನುವ ನಿರೀಕ್ಷೆ ಸಿನಿಪ್ರಿಯರದ್ದು. ಈ ಚಿತ್ರ ವಿಶ್ವದ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಗಳಿಸಿದೆ. ಇನ್ನು, ಅವತಾರ್ ಸಿನಿಮಾದ ಮುಂದುವರಿದ ಕಥೆ ತಿಳಿದುಕೊಳ್ಳಲು ಪ್ರೇಕ್ಷಕರು ಕಾತರರಾಗಿದ್ದು, ಟಿಕೆಟ್ ದರ ಮಾತ್ರ ಪ್ರೇಕ್ಷಕರ ತಲೆತಿರುಗುವಂತೆ ಮಾಡಿದೆ.
ಸದ್ಯ ಈ ಸಿನಿಮಾದ ಟಿಕೆಟ್ ಬುಕ್ಕಿಂಗ್ ದೇಶಾದ್ಯಂತ ಆರಂಭವಾಗಿದೆ. ಇಂಗ್ಲಿಷ್ ಸೇರಿದಂತೆ ಏಳು ಭಾಷೆಗಳಲ್ಲಿ 'ಅವತಾರ್ 2' ಬಿಡುಗಡೆಯಾಗುತ್ತಿರುವುದು ವಿಶೇಷ. ಪ್ರಮುಖ ಟಿಕೆಟ್ ಬುಕ್ಕಿಂಗ್ ಸೈಟ್ಗಳು ಮತ್ತು ಅಪ್ಲಿಕೇಶನ್ಗಳು ಪ್ರಮುಖ ನಗರಗಳಲ್ಲಿನ ಥಿಯೇಟರ್ಗಳಲ್ಲಿ ಟಿಕೆಟ್ ಖರೀದಿಸಲು ಅನುವು ಮಾಡಿಕೊಡುತ್ತಿದೆ. 'ಅವತಾರ್ 2' (ಅವತಾರ್: ದಿ ವೇ ಆಫ್ ವಾಟರ್) IMAX 3D ಮತ್ತು 4DX 3D ಸ್ವರೂಪಗಳಲ್ಲಿ ಬಿಡುಗಡೆಯಾಗುತ್ತಿರುವುದರಿಂದ, ಪ್ರೇಕ್ಷಕರು ಆ ಪರದೆಯ ಮೇಲೆಯೇ ಚಿತ್ರ ವೀಕ್ಷಿಸಲು ಆಸಕ್ತಿ ಹೊಂದಿದ್ದಾರೆ.
ಅವತಾರ್ 2 ಟಿಕೆಟ್ ಬೆಲೆ: ಆದರೆ ಈ ಸ್ವರೂಪದ ಪರದೆಗಳ ಟಿಕೆಟ್ ದರಗಳು ದುಬಾರಿಯಾಗಿದೆ. ಜನಪ್ರಿಯ ಟಿಕೆಟ್ ಬುಕ್ಕಿಂಗ್ ಸೈಟ್ ಬೆಂಗಳೂರಿನಲ್ಲಿ IMAX 3D ಫಾರ್ಮ್ಯಾಟ್ ಥಿಯೇಟರ್ ಟಿಕೆಟ್ ಬೆಲೆ ರೂ.1,450 ತೋರಿಸುತ್ತಿದೆ. ಹಾಗೆಯೇ ಪುಣೆಯಲ್ಲಿ ರೂ.1200 (4ಡಿಎಕ್ಸ್ 3ಡಿ), ದೆಹಲಿ-ಎನ್ಸಿಆರ್ ನಲ್ಲಿ ರೂ.1000, ಮುಂಬೈನಲ್ಲಿ ರೂ.970, ಕೋಲ್ಕತ್ತಾ ರೂ.770, ಅಹಮದಾಬಾದ್ ರೂ.750, ಇಂದೋರ್ ರೂ.700, ಹೈದರಾಬಾದ್ ರೂ.350, ವಿಶಾಖಪಟ್ಟಣಂ ರೂ.210 (3ಡಿ ಫಾರ್ಮ್ಯಾಟ್) ದರ ಇದೆ.
ಈ ಎಲ್ಲಾ ಬೆಲೆಗಳು ಕೇವಲ ಸಾಮಾನ್ಯ ಆಸನಗಳಿಗೆ. ತೆರಿಗೆಗಳು ಮತ್ತು ಇಂಟರ್ನೆಟ್ ಶುಲ್ಕ ಬೇರೆಯೇ ಇದೆ. ರಿಕ್ಲೈನರ್ ಆಸನಗಳ (recliner seating) ಬೆಲೆಗಳ ವಿವರಗಳು ಇನ್ನೂ ತಿಳಿದುಬಂದಿಲ್ಲ. ಶೀಘ್ರದಲ್ಲೇ ಸಾಮಾನ್ಯ ಚಿತ್ರ ಮಂದಿರಗಳಲ್ಲಿ ಟಿಕೆಟ್ ಲಭ್ಯವಾಗಲಿದೆ. ಇನ್ನೂ ಕೆಲವು ಥಿಯೇಟರ್ಗಳಲ್ಲಿ ಆಸನಗಳನ್ನು ಅವಲಂಬಿಸಿ ಮೇಲಿನ ಬೆಲೆಗಳು ಸ್ವಲ್ಪ ಬದಲಾಗಬಹುದು.