ಜೇಮ್ಸ್ ಕ್ಯಾಮರಾನ್ ನಿರ್ದೇಶನದ 'ಅವತಾರ್: ದಿ ವೇ ಆಫ್ ವಾಟರ್' ಇಂದು ಬಿಡುಗಡೆ ಆಗಿ ವಿಶ್ವದಾದ್ಯಂತ ಜನರನ್ನು ಬೇರೆಯೇ ಲೋಕಕ್ಕೆ ಕೊಂಡೊಯ್ಯುತ್ತಿದೆ. ಅತ್ಯಾಧುನಿಕ ಗ್ರಾಫಿಕ್ಸ್ ತಂತ್ರಜ್ಞಾನ ಬಳಸಿರುವ ಈ ಚಿತ್ರ 2ಡಿ, 3ಡಿ, ಐಮ್ಯಾಕ್ಸ್ 3ಡಿ, 4ಡಿಎಕ್ಸ್ ಮುಂತಾದ ವರ್ಷನ್ಗಳಲ್ಲಿ ಪ್ರದರ್ಶನ ಕಾಣುತ್ತಿದೆ.
'ಅವತಾರ್'2009ರಲ್ಲಿ ತೆರೆಕಂಡು ವಿಶ್ವದಾದ್ಯಂತ ಧೂಳೆಬ್ಬಿಸಿದ ಜೇಮ್ಸ್ ಕ್ಯಾಮರಾನ್ ಅವರ ಚಿತ್ರ. ಪರದೆ ಮೇಲೆ ಬರುವ ಒಂದೊಂದು ದೃಶ್ಯವೂ ಕೂಡ ರೋಮಾಂಚನಕಾರಿ. ಇದೀಗ ಅದರ ಮುಂದುವರಿದ ಭಾಗ ಅವತಾರ್ 2 ಬಿಡುಗಡೆಯಾಗಿ ಸಿನಿ ರಸಿಕರನ್ನು ಮೋಡಿ ಮಾಡುತ್ತಿದೆ.
2009ರಲ್ಲಿ ಬಿಡುಗಡೆಯಾದ ಮೊದಲ 'ಅವತಾರ್' ಚಿತ್ರವು 162 ನಿಮಿಷಗಳ ಅವಧಿ ಹೊಂದಿತ್ತು. ಅಂದರೆ 2 ಗಂಟೆ 42 ನಿಮಿಷಗಳು. 'ಅವತಾರ್ 2' ಅವಧಿಯು 192 ನಿಮಿಷಗಳು, 10 ಸೆಕೆಂಡುಗಳು. ಅಂದರೆ 3 ಗಂಟೆ 12 ನಿಮಿಷ 10 ಸೆಕೆಂಡುಗಳು. ಮೂರು ಗಂಟೆಗಳ ಕಾಲ ಪ್ರೇಕ್ಷಕರನ್ನು ಮತ್ತೊಂದು ಹೊಸ ಲೋಕಕ್ಕೆ ಕೊಂಡೊಯ್ಯುವುದು ಖಚಿತ ಎಂದು ಜೇಮ್ಸ್ ಕ್ಯಾಮರಾನ್ ಈ ಮೊದಲು ತಿಳಿಸಿದ್ದು, ಇಂದು ರಿಲೀಸ್ ಆಗಿದೆ.
ಅವತಾರ್ ಸರಣಿಯಿಂದ ಐದು ಸಿನಿಮಾಗಳು ಹೊರ ಬರಲಿವೆ. ಮೊದಲ ಸಿನಿಮಾ 2009ರಲ್ಲಿ ತೆರೆಗೆ ಅಪ್ಪಳಿಸಿತ್ತು. ಇದಾದ ಬಳಿಕ ಸೀಕ್ವೆಲ್ ಬರಲು ಸುಮಾರು 13 ವರ್ಷಗಳೇ ಬೇಕಾಯಿತು. ಇದೀಗ ಚಿತ್ರದ ದೃಶ್ಯವೈಭವ ನೋಡಿ ಸಿನಿಪ್ರಿಯರು ನಿಬ್ಬೆರಗಾಗಿದ್ದಾರೆ. ಭೂಮಿಯಂತೆ ಕಾಣುವ ಆಕರ್ಷಕ ಪಂಡೋರಾ ಜಗತ್ತಿನಲ್ಲಿ ವಾಸಿಸುವ 'ನಾವಿ' ಜೀವಿಗಳ ಕುಟುಂಬ ಮತ್ತಷ್ಟು ವಿಸ್ತಾರಗೊಂಡಿದೆ. ಅವರೊಂದಿಗೆ ಬೆಸೆದುಕೊಂಡಿರುವ ಹಾರುವ ಜೀವಿಗಳ ಜೊತೆಗೆ ಈಜುವ ವಿಶೇಷ ಜಲಚರಗಳ ದರ್ಶನವೂ ಆಗುತ್ತದೆ. ನೀರಿನೊಳಗೆ, ಮೇಲೆ.. ಹೀಗೆ ನೀರು ಇಲ್ಲಿನ ಕಥಾವಸ್ತು ಎಂಬಂತೆ ಭಾಸವಾಗುತ್ತದೆ.
ಇದನ್ನೂ ಓದಿ:ಬೇಷರಮ್ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್ ಬಗ್ಗೆ ಮೌನ ಮುರಿದ ಶಾರುಖ್ ಖಾನ್
ಅವತಾರ್: ದಿ ವೇ ಆಫ್ ವಾಟರ್ ಭಾರತದಲ್ಲಿ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ವಿಶ್ವಾಸದಲ್ಲಿದೆ. ಈಗಾಗಲೇ ಭಾರಿ ಸಂಖ್ಯೆಯಲ್ಲಿ ಟಿಕೆಟ್ ಬುಕಿಂಗ್ ಆಗಿದ್ದು, ದಾಖಲೆ ಪ್ರಮಾಣದ ಕಲೆಕ್ಷನ್ ಆಗುವ ಸುಳಿವು ಸಿಕ್ಕಿದೆ. ಕೆಲವು ಮಲ್ಟಿಪ್ಲೆಕ್ಸ್ಗಳಲ್ಲಿ ಒಂದು ಟಿಕೆಟ್ ಬೆಲೆ 1 ಸಾವಿರದಿಂದ 2 ಸಾವಿರ ರೂಪಾಯಿ ದಾಟಿದ್ದರೂ ಕೂಡ ಸಿನಿಪ್ರಿಯರು ಬುಕ್ ಮಾಡುವಲ್ಲಿ ಹಿಂದೇಟು ಹಾಕುತ್ತಿಲ್ಲ ಅನ್ನೋದು ಈ ಚಿತ್ರದ ಕ್ರೇಜ್ಗೆ ಸಾಕ್ಷಿಯಾಗಿದೆ.