ಇಡೀ ವಿಶ್ವ ಚಿತ್ರರಂಗವೇ ಕುತೂಹಲದಿಂದ ಕಾಯುತ್ತಿದ್ದ 'ಅವತಾರ್ 2' ಕೊನೆಗೂ ಪ್ರೇಕ್ಷಕರ ಮುಂದೆ ಬಂದು ಮನೋರಂಜನೆ ನೀಡುತ್ತಿದೆ. ಜೇಮ್ಸ್ ಕ್ಯಾಮರಾನ್ ನಿರ್ದೇಶನದ ಅವತಾರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದೆ. ಸುಮಾರು 3 ಸಾವಿರ ಕೋಟಿ ಬಜೆಟ್ನಲ್ಲಿ ತಯಾರಾದ ಈ ಸಿನಿಮಾ ಶುಕ್ರವಾರ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಗಳಿಸಿದೆ. ದೃಶ್ಯ ವೈಭವ ದೃಷ್ಟಿಯಿಂದಲೂ ಸಿನಿಮಾ ಅದ್ಭುತವಾಗಿದೆ ಎನ್ನುತ್ತಾರೆ ಚಿತ್ರಪ್ರೇಮಿಗಳು. ಚಿತ್ರ ವಿಶ್ಲೇಷಕ ರಮೇಶ್ ಬಾಲಾ ನೀಡಿರುವ ಮಾಹಿತಿ ಪ್ರಕಾರ ಚಿತ್ರ ವಿಶ್ವದಾದ್ಯಂತ 300 ಕೋಟಿ ಕಲೆಕ್ಷನ್ ಮಾಡಿದೆ. ಭಾರತದಲ್ಲಿ ಮೊದಲ ದಿನವೇ 58 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎನ್ನಲಾಗುತ್ತಿದೆ.
ಆದಾಗ್ಯೂ ಅನೇಕ ಚಲನಚಿತ್ರ ವೆಬ್‌ಸೈಟ್‌ಗಳ ಪ್ರಕಾರ, ಚಿತ್ರವು ಮೊದಲ ದಿನ ಭಾರತದಲ್ಲಿ 35-38 ಕೋಟಿ ಕಲೆಕ್ಷನ್ ಮಾಡಿದೆ. 2022ರಲ್ಲಿ ಭಾರತೀಯ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮೊದಲ ದಿನ ಅತಿ ಹೆಚ್ಚು ಗಳಿಕೆ ಮಾಡಿದ ಹಾಲಿವುಡ್ ಚಿತ್ರ ಇದಾಗಿದೆ ಎಂದು ಹೇಳಲಾಗ್ತಿದೆ. ಆ ನಂತರ ಡಾಕ್ಟರ್ ಸ್ಟ್ರೇಂಜ್ (28.35 ಕೋಟಿ), ಥೋ ಲವ್ ಅಂಡ್ ಥಂಡರ್ (18.2 ಕೋಟಿ), ಬ್ಲ್ಯಾಕ್ ಪ್ಯಾಂಥರ್ (12 ಕೋಟಿ), ಜುರಾಸಿಕ್ ವರ್ಲ್ಡ್ (8 ಕೋಟಿ), ಬ್ಲ್ಯಾಕ್ ಆಡಮ್ (6.8 ಕೋಟಿ), ದಿ ಬ್ಯಾಟ್ ಮ್ಯಾನ್ (6.66 ಕೋಟಿ) ನೆಟ್ ಕಲೆಕ್ಷನ್ ಮಾಡಿದೆ.