ಆಪಲ್ ಕಟ್ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ದೇಶಕ ರಾಜಕಿಶೋರ್ ಅವರ ಪುತ್ರಿ ಸಿಂಧು ಗೌಡ ನಿರ್ದೇಶನ ಮಾಡಿರುವುದು ಗೊತ್ತಿರುವ ವಿಚಾರ. ಇದೀಗ ಚಿತ್ರೀಕರಣ ಮುಗಿಸಿರುವ ತಂಡ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ನಿರ್ದೇಶಕ ಯೋಗರಾಜ್ ಭಟ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗು ನಟಿ ರಾಗಿಣಿ ದ್ವಿವೇದಿ ಟೀಸರ್ ಬಿಡುಗಡೆ ಮಾಡುವ ಮೂಲಕ ತಂಡಕ್ಕೆ ಸಾಥ್ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಟಿ, ನಿರ್ದೇಶಕಿ, ನಿರ್ಮಾಪಕಿ ಪ್ರಿಯಾ ಹಾಸನ್ ಹಾಗೂ ರೂಪ ಅಯ್ಯರ್, ನಿರ್ದೇಶಕ ಗಡ್ಡ ವಿಜಿ ಉಪಸ್ಥಿತರಿದ್ದರು. ಹೊಸ ಪ್ರತಿಭೆಗಳಾದ ಕಾಮಿಡಿ ಕಿಲಾಡಿ ಅಪ್ಪಣ್ಣ, ಯುವ ನಟ ಸೂರ್ಯ ಹಾಗು ನಾಯಕಿ ನಟಿಯರಾದ ಅಮೃತ, ಮೀನಾಕ್ಷಿ ಇದ್ದರು. ಬಾಲ ರಾಜವಾಡಿ ಕೂಡ ವಿಭಿನ್ನ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕಿ ಸಿಂಧು ಗೌಡ, "ನಾನು ಯಾರ ಬಳಿಯೂ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿಲ್ಲ. ನಮ್ಮ ಅಪ್ಪನ ಕಾರ್ಯವೈಖರಿ ನೋಡಿ ನನಗೆ ನಿರ್ದೇಶನದ ಆಸೆ ಹುಟ್ಟಿತ್ತು. ಕಿರುತೆರೆಯಲ್ಲಿ ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದೇನೆ. ನಾನೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಮೊದಲ ಚಿತ್ರವಿದು. ಆಪಲ್ ಕಟ್ ಐದು ಜನ ಗೆಳೆಯರ ಸುತ್ತ ನಡೆಯುವ ಕಥೆ. ನಾನು ಮಾನವಶಾಸ್ತ್ರ ಓದಿರುವುದರಿಂದ ಮಾನವಶಾಸ್ತ್ರದ ಒಂದು ಅಂಶವನ್ನೂ ಸೇರಿಸಲಾಗಿದೆ. ನಿಜವಾದ ಶವವೊಂದನ್ನೂ ಸಹ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಅದು ಕೂಡ ಪ್ರಮುಖ ಪಾತ್ರವಹಿಸಿದೆ" ಎಂದರು.