ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ನಟ ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿ ಹಲವು ದಿನಗಳು ಉರುಳುತ್ತಿದ್ದು, ಅವರ ನೆನಪು ಮಾತ್ರ ಸದಾ ಜೀವಂತ. ಅಪ್ಪು ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ, ಅಭಿಮಾನಿಗಳ ಹೃದಯದಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಚಿತ್ರರಂಗ, ಅಭಿಮಾನಿಗಳು, ಜನಸಾಮಾನ್ಯರು ಒಂದಲ್ಲ ಒಂದು ರೀತಿಯಲ್ಲಿ ಅಪ್ಪು ಸ್ಮರಣೆ ಮಾಡುತ್ತಿದ್ದಾರೆ.
ಪುನೀತ್ ಹೆಸರಲ್ಲಿ ಸಮಾಜ ಸೇವೆ: ವರನಟ ರಾಜ್‌ಕುಮಾರ್ ಕಿರಿಯ ಪುತ್ರ, ಚಂದನವನದ ಅದ್ಭುತ ನಟ, ದಿ. ಪುನೀತ್ ರಾಜ್‌ಕುಮಾರ್ ಜೀವನ ಹಲವರಿಗೆ ಪ್ರೇರಣೆ. ನಟ ನಡೆಸಿಕೊಂಡು ಬಂದಿದ್ದ ಸಮಾಜ ಸೇವೆ ಅವರು ಇಹಲೋಕ ತ್ಯಜಿಸಿದ ಬಳಿಕ ಹೆಚ್ಚು ಬೆಳಕಿಗೆ ಬಂತು. ಸಿನಿಮಾ ಮಾತ್ರವಲ್ಲದೇ ಸಮಾಜಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಿದ್ದಾರೆ. ಅವರ ನಡೆ ನುಡಿ ಇಂದು ಹಲವರಿಗೆ ಸ್ಫೂರ್ತಿ. ಪ್ರಸ್ತುತ, ಪುನೀತ್ ಹೆಸರಲ್ಲಿ ಹಲವು ಸಮಾಜ ಸೇವೆ ನಡೆಯುತ್ತಿದೆ. ವಿಭಿನ್ನ ರೀತಿಯಲ್ಲಿ ಅಭಿಮಾನ ವ್ಯಕ್ತಪಡಿಸಲಾಗುತ್ತಿದೆ.
ಅದರಂತೆ ಇತ್ತೀಚೆಗಷ್ಟೇ ರೈತರೊಬ್ಬರು ತಮ್ಮ ಜಮೀನಿನಲ್ಲಿ ಅಪ್ಪು ಭಾವಚಿತ್ರ ಮೂಡಿಸುವ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದರು. ಭತ್ತದ ಬೆಳೆಯಲ್ಲಿ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಮೂಡಿ ಬಂದಿತ್ತು. ಈ ಸುದ್ದಿ ರಾಜ್ಯಾದ್ಯಂತ ಸಖತ್ ಸದ್ದು ಮಾಡಿತ್ತು. ವಿಚಾರ ಪುನೀತ್ ಪತ್ನಿ ಅಶ್ವಿನಿ ಅವರ ವರೆಗೂ ತಲುಪಿತು. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ರೈತನಿಗೆ ತುಂಬು ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ. ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ವಿಡಿಯೋ ಪೋಸ್ಟ್ ಮಾಡಿ, ರೈತನಿಗೆ ಕೃತಘ್ಞತೆ ಅರ್ಪಿಸಿದ್ದಾರೆ.
ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್:''ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಶ್ರೀನಿವಾಸ ಕ್ಯಾಂಪ್ನ ಶ್ರೀ ಕೆ. ಸತ್ಯನಾರಾಯಣ ಅವರು ತಮ್ಮ 2 ಎಕರೆ ಜಮೀನಿನ ಭತ್ತದಲ್ಲಿ ಅಪ್ಪು ಅವರ ವಿಶೇಷ ಚಿತ್ರ ನಿರ್ಮಿಸಿ ತಮ್ಮ ಪ್ರೀತಿಯನ್ನು ತೋರಿದ್ದಾರೆ. ತಮ್ಮ ಅಂಗವಿಕಲತೆಯನ್ನು ಮೆಟ್ಟಿ ನಿಂತು ಈ ಅದ್ಭುತ ಸಾಧನೆಯನ್ನು ಮಾಡಿರುವ ನಿಮಗೆ ನಾವು ಚಿರಋಣಿ. ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಹಾಗೂ ಶಕ್ತಿಯನ್ನು ನೀಡಲಿ ಎಂಬುದು ನಮ್ಮೆಲ್ಲರ ಕೋರಿಕೆ'' ಎಂದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಭತ್ತದ ಬೆಳೆಯಲ್ಲೇ ಮೂಡಿಬಂದ ಪುನೀತ್ ರಾಜ್‌ಕುಮಾರ್! ರಾಯಚೂರು ರೈತನ ವಿಭಿನ್ನ ಅಭಿಮಾನ
2021ರ ಅಕ್ಟೋಬರ್ 29 ಪುನೀತ್ ರಾಜ್‌ಕುಮಾರ್ ಇಹಲೋಕ ತ್ಯಜಿಸಿದರು. ಈ ಅಕ್ಟೋಬರ್ 29ಕ್ಕೆ 2 ವರ್ಷ ಪೂರ್ಣಗೊಳ್ಳಲಿದೆ. 2ನೇ ವರ್ಷದ ಪುಣ್ಯಸ್ಮರಣೆ ಹಿನ್ನೆಲೆ ರಾಯಚೂರಿನ ರೈತ ವಿಭಿನ್ನವಾಗಿ ಗೌರವ, ಪ್ರೀತಿ ವ್ಯಕ್ತಪಡಿಸಿದ್ದಾರೆ. ರೈತ ಸತ್ಯನಾರಾಯಣ ಅವರು ತಮ್ಮ ಎರಡು ಎಕರೆ ಜಮೀನಿನಲ್ಲಿ ಭತ್ತದ ಬೆಳೆಯಲ್ಲೇ ಪುನೀತ್ ರಾಜ್‌ಕುಮಾರ್ ಭಾವಚಿತ್ರ ಮೂಡಿಸಿದ್ದಾರೆ. ಅಂದರೆ ಅಪ್ಪುವಿನ ಭಾವಚಿತ್ರಕ್ಕೆ ತಕ್ಕಂತೆ ಭತ್ತ ಬೆಳೆದಿದ್ದಾರೆ. ಈ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅಂಗವಿಕಲತೆಗೆ ತುತ್ತಾಗಿರುವ ಸತ್ಯನಾರಾಯಣ ಅವರ ಈ ಕಾರ್ಯಕ್ಕೆ ಜನರು ಮೆಚ್ಚುಗೆ ಸೂಚಿಸಿದ್ದಾರೆ. ಇತ್ತೀಚೆಗೆ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರನ್ನು ರೈತ ಸತ್ಯನಾರಾಯಣ ಅವರು ಭೇಟಿ ಆಗಿದ್ದರು. ಆ ವೇಳೆ ರೈತರಿಗೆ ಅಶ್ವಿನಿ ಅವರು ಧನ್ಯವಾದ ಅರ್ಪಿಸಿದ್ದಾರೆ.
ಇದನ್ನೂ ಓದಿ:ರಾಮೋಜಿ ಫಿಲ್ಮ್ ಸಿಟಿಯಲ್ಲಿ 110 ವರ್ಷಗಳ ಭಾರತೀಯ ಸಿನಿಮಾ ಫೆಸ್ಟಿವಲ್ ಶುರು!