ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಒಡೆತನದ ಪಿಆರ್ಕೆ ಪ್ರೊಡಕ್ಷನ್ಸ್ ಹೌಸ್ನಿಂದ ಸಂದೇಶದ ಜತೆಗೆ, ಸದಭಿರುಚಿಯ ಸಿನಿಮಾಗಳು ಬರ್ತಾ ಇವೆ. ಈ ಸಾಲಿನಲ್ಲಿ 'ಆಚಾರ್ & ಕೋ' ಸಿನಿಮಾ ಕಳೆದ ವಾರವಷ್ಟೇ ರಾಜ್ಯಾದ್ಯಂತ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು.
ಸಿನ್ಸ್ 1971 ಎಂಬ ಟ್ಯಾಗ್ಲೈನ್ ಹೊಂದಿರುವ ಆಚಾರ್ & ಕೋ ಸಿನಿಮಾ 1960ರ ಕಾಲಘಟ್ಟದಲ್ಲಿ ಬೆಂಗಳೂರಿನಲ್ಲಿ ನಡೆಯುವ ಕಥೆ. ಸುಸಂಸ್ಕೃತ ಕುಟುಂಬದಲ್ಲಿ ಹತ್ತು ಜನ ಮಕ್ಕಳು ತಮ್ಮ ಕನಸುಗಳನ್ನು ಬೆನ್ನತ್ತುವ ಹಾದಿಯಲ್ಲಿ ಹೇಗೆ ಸವಾಲುಗಳನ್ನು ಎದುರಿಸುತ್ತಾರೆ ಮತ್ತು ಸಂಪ್ರದಾಯಗಳನ್ನು ಮೀರದೆ ಆಧುನಿಕ ಜಗತ್ತಿನ ಅವಶ್ಯಕತೆಗಳನ್ನು ಹೇಗೆ ನಿಭಾಯಿಸಿ ಗೆಲ್ಲುತ್ತಾರೆ ಎಂಬುದನ್ನು ಹೇಳುವ ಒಂದು ಭಾವನಾತ್ಮಕ ಚಿತ್ರ.
ಅಶ್ವಿನಿ ಪುನೀತ್ ರಾಜ್ಕುಮಾರ್ 60ರದ ದಶಕದ ಬೆಂಗಳೂರನ್ನ ನೆನಪಿಸುವ ಆಚಾರ್ & ಕೋ ಸಿನಿಮಾ ಸಿನಿ ಪ್ರೇಮಿಗಳ ಹೃದಯ ಕದಿಯುವಲ್ಲಿ ಯಶಸ್ವಿಯಾಗಿದೆ. ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಬಹಳ ಚೆನ್ನಾಗಿ ಈ ಸಿನಿಮಾವನ್ನು ಪ್ರಚಾರ ಮಾಡುವ ಮುಖಾಂತರ ಚಿತ್ರವನ್ನು ಪ್ರೇಕ್ಷಕರಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಈ ಸಿನಿಮಾ ಬಿಡುಗಡೆ ಆಗಿ ಫ್ಯಾಮಿಲಿ ಆಡಿಯನ್ಸ್ಗೆ ಇಷ್ಟ ಆಗಿದೆ. ಈ ಹಿನ್ನೆಲೆ ಆಚಾರ್ & ಕೋ ಸಿನಿಮಾದ ಸಕ್ಸಸ್ ಖುಷಿಯನ್ನ ಚಿತ್ರತಂಡ ಹಮ್ಮಿಕೊಂಡಿತ್ತು.
ಅಶ್ವಿನಿ, ಪುನೀತ್ ರಾಜ್ಕುಮಾರ್ ಆಚಾರ್ & ಕೋ ಸಿನಿಮಾವನ್ನ ವಿತರಣೆ ಮಾಡಿರುವ ಯೋಗಿ ಜಿ ರಾಜ್ ಮಾತನಾಡಿ "ಸಿಂಗಲ್ ಸ್ಕ್ರೀನ್ಗಿಂತ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗೆ ರೆಸ್ಪಾನ್ಸ್ ಚೆನ್ನಾಗಿದೆ. ಕೆಲವು ತಿಂಗಳುಗಳಿಂದ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ಸಿನಿಮಾ ಪ್ರೇಕ್ಷಕರು ಬರ್ತಾ ಇಲ್ಲ ಎಂಬ ಮಾತುಗಳು ಕೇಳಿ ಬಂದಿದ್ದವು. ಆ ಮಾತನ್ನು ಈ ಸಿನಿಮಾ ಸುಳ್ಳು ಮಾಡಿದೆ. ಬೆಂಗಳೂರು, ಮೈಸೂರು, ಮಂಡ್ಯ, ಶಿವಮೊಗ್ಗದಲ್ಲಿ ಸಿಂಗಲ್ ಸ್ಕ್ರೀನ್ ಥಿಯೇಟರ್ಗಳಲ್ಲಿ ಈ ಸಿನಿಮಾಗೆ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಲೆಕ್ಷನ್ ಕೂಡ ಚೆನ್ನಾಗಿದೆ" ಎಂದರು.
ಬಳಿಕ ಮಾತನಾಡಿದ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ 'ಅಪ್ಪು ಇದ್ದಾಗ ನಾನು ಈ ಚಿತ್ರದ 6 ನಿಮಿಷದ ಶೋ ರೀಲ್ ನೋಡಿದಾಗಲೇ ತುಂಬಾ ಇಷ್ಟ ಆಗಿತ್ತು. ಆವಾಗಲೇ ಆಚಾರ್ & ಕೋ ಚಿತ್ರವನ್ನು ಮಾಡಬೇಕು ಅಂತಾ ನಾನು, ಅಪ್ಪು ಇಬ್ಬರು ಒಪ್ಪಿದ್ದೆವು. ದಿನದಿಂದ ದಿನಕ್ಕೆ ಚಿತ್ರ ನೋಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ನಮ್ಮ ಚಿತ್ರ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ' ಎಂದು ಹರ್ಷ ವ್ಯಕ್ತಪಡಿಸಿದರು.
ಅಶ್ವಿನಿ ಪುನೀತ್ ರಾಜ್ಕುಮಾರ್ ಇದರ ಜತೆಗೆ ಪಾರ್ವತಮ್ಮ ಅಮ್ಮ ವಜ್ರೇಶ್ವರಿ ಕಂಬೈನ್ಸ್ನಲ್ಲಿ ಮಾಡ್ತಿದ್ದ ಫ್ಯಾಮಿಲಿ ಸಿನಿಮಾ ತರ ಅನ್ನಿಸ್ತು. ಅಮ್ಮ ಕಾದಂಬರಿಗಳನ್ನು ಓದೋಕೆ ಹೇಳುತ್ತಿದ್ದರು. ಅದೇ ರೀತಿ ನಾನು ಈಗ ಪುಸ್ತಕ ಓದುತ್ತಿದ್ದೇನೆ. ಸಿನಿಮಾ ನೋಡುತ್ತಿದ್ದೇನೆ. ಅಪ್ಪು ಪ್ರೊಡಕ್ಷನ್ ವಿಚಾರದಲ್ಲಿ ಸ್ವಲ್ಪ ಫ್ರೀ ಇದ್ರು. ಆದರೆ ಪಾರ್ವತಮ್ಮ ಬಜೆಟ್ ಕಡೆ ಗಮನ ಕೊಡ್ತಿದ್ರು. ಈಗ ನಾನು ಅಪ್ಪು ಹಾಗೂ ಅಮ್ಮನ ತರ ಇಬ್ಬರನ್ನು ಫಾಲೋ ಮಾಡಿ ನನ್ನ ಎಫರ್ಟ್ ಹಾಕಿ ಸಿನಿಮಾ ಮಾಡ್ತೀನಿ. ಪ್ರೊಡಕ್ಷನ್ ವಿಚಾರದಲ್ಲಿ ನಾನು ಸ್ವಲ್ಪ ಸ್ಟ್ರಿಕ್ಟ್ ಆಗಿ ಇರ್ತೀನಿ. ನನಗೆ ಫ್ಯಾಮಿಲಿ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾಗಳು ಅಂದ್ರೆ ಇಷ್ಟ. ಯಾರಾದ್ರು ಥ್ರಿಲ್ಲರ್ ಕಥೆ ಹೇಳಿದರೆ ಆ ಸಿನಿಮಾ ಮಾಡ್ತೀನಿ. ಮುಂದಿನ ದಿನಗಳಲ್ಲಿ ನಾನು ಹೆಚ್ಚು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು, ಯುವರಾಜ್ ಕುಮಾರ್ ಅವರನ್ನ ಪಿಆರ್ಕೆ ಬ್ಯಾನರ್ನಲ್ಲಿ ಲಾಂಚ್ ಮಾಡುವ ಕನಸು ಅಪ್ಪು ಅವರಿಗಿತ್ತು. ಆದರೆ ಯುವ ಈಗ ಹೊಂಬಾಳೆ ಫಿಲ್ಮ್ಸ್ ಜೊತೆ ಸಿನಿಮಾ ಮಾಡುತ್ತಿದ್ದಾನೆ. ಮುಂದಿನ ದಿನಗಳಲ್ಲಿ ಯುವ ಜತೆ ನಮ್ಮ ಪಿಆರ್ಕೆ ಬ್ಯಾನರ್ನಲ್ಲಿ ಸಿನಿಮಾ ಮಾಡುತ್ತೇನೆ. ಆದರೆ ಯುವರಾಜ್ ಡೇಟ್ ಕೊಡಬೇಕು ಅಂತಾ ಅಶ್ವಿನಿ ಪುನೀತ್ ರಾಜ್ ಕುಮಾರ್ ಮುಗುಳ್ನಕ್ಕರು.
ದಿ.ಪುನೀತ್ ರಾಜ್ಕುಮಾರ್ ಅವರ ಸದಾಶಿವ ನಗರದ ನಿವಾಸದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ಸಿನಿಮಾದ ವಿತರಣೆ ಮಾಡಿದ ಕೆಆರ್ಜಿ ಸ್ಟುಡಿಯೋನ ಮಾಲೀಕರಾದ ಯೋಗಿ ಜಿ ರಾಜ್, ನಟಿ ಹಾಗೂ ನಿರ್ದೇಶಕ ಸಿಂಧು ಶ್ರೀನಿವಾಸಮೂರ್ತಿ ಸೇರಿದಂತೆ ಇಡೀ ಚಿತ್ರತಂಡ ಇಲ್ಲಿ ಉಪಸ್ಥಿತರಿದ್ದರು.