'ವಜ್ರಕಾಯ', 'ಕಿರುಗೂರಿನ ಗಯ್ಯಾಳಿಗಳು' ಹಾಗೂ 'ಪೆಟ್ರೋಮ್ಯಾಕ್ಸ್' ಚಿತ್ರಗಳಿಂದ ಸ್ಯಾಂಡಲ್ವುಡ್ನಲ್ಲಿ ತನ್ನದೇ ಬೇಡಿಕೆ ಹೊಂದಿರುವ ನಟಿ ಕಾರುಣ್ಯ ರಾಮ್. ಸಿನಿಮಾ ಅಭಿನಯದ ಜೊತೆಗೆ ತಮ್ಮದೇ ಆದ ಸಂಸ್ಕಾರ ಟ್ರಸ್ಟ್ ವತಿಯಿಂದ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡುತ್ತ ಬರ್ತಾ ಇದ್ದಾರೆ. ಇತ್ತೀಚೆಗೆ ಕರ್ನಾಟಕ ಸಿಂಡಿಕೇಟ್ ಫೌಂಡೇಶನ್ ಹಾಗೂ ಕಿಮ್ಸ್ ಆಸ್ಪತ್ರೆಯ ಸಹಯೋಗದಲ್ಲಿ ಅಂಗಾಂಗ ದಾನ ಶಿಬಿರ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್ ಹಾಗೂ ನಟ ಧ್ರುವ ಸರ್ಜಾ ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದರು. ಅಶ್ವಿನಿ ಪುನೀತರಾಜಕುಮಾರ್ ಅವರು ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ನಟಿ ಕಾರುಣ್ಯ ರಾಮ್, "ಅಂಗಾಂಗ ದಾನ ಮಾಡುವುದರಿಂದ ನಾವು ಸತ್ತ ಬಳಿಕವೂ ನಮ್ಮ ಉಪಯೋಗ ಆಗುತ್ತದೆ. ಅಂಗಾಂಗ ದಾನದಿಂದ ಪುಣ್ಯ ಸಿಗುತ್ತೆ. ಎಲ್ಲರೂ ಅಂಗಾಂಗ ದಾನ ಮಾಡಿ" ಎಂದು ಮನವಿ ಮಾಡಿದರು.
ನಂತರ ಮಾತನಾಡಿದ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, "ನಾವು ಯೂಸ್ಲೆಸ್ ಅಂತ ಹೇಳುತ್ತಿರುತ್ತೇವೆ. ಆದರೆ ಇಲ್ಲಿ ಯಾರೂ ಯೂಸ್ಲೆಸ್ ಅಲ್ಲ. ಯೂಸ್ಡ್ ಲೆಸ್ ಅಷ್ಟೇ. ಅಂಗಾಂಗ ದಾನ ಮಾಡಿ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ. ನಾವು ಸತ್ತ ಮೇಲೂ ಇನ್ನೊಬ್ಬರಿಗೆ ಉಪಯೋಗ ಆಗುತ್ತೆ ಎಂದರೆ ಯಾಕೆ ಮಾಡಬಾರದು. ಎಲ್ಲರೂ ದಯವಿಟ್ಟು ಇದಕ್ಕೆ ಕೈ ಜೋಡಿಸಿ. ನಿಮ್ಮ ಪಕ್ಕದವರಿಗೂ ಹೇಳಿ. ಇಂತಹ ಶಿಬಿರಗಳನ್ನು ಎಲ್ಲಾ ಕಡೆ ಮಾಡಬೇಕು" ಎಂದು ಹೇಳಿದರು.
ಇನ್ನು, ಈ ಕಾರ್ಯಕ್ರಮದಲ್ಲಿ ಸುಮಾರು 700 ರಿಂದ 1000 ಮಂದಿ ಅಂಗಾಂಗ ದಾನ ಪ್ರತಿಗೆ ಸಹಿ ಮಾಡಿದರು. ಈ ವೇಳೆ ಹೆಲ್ತ್ ಅಂಡ್ ವೆಲ್ತ್ ಜಾಯಿಂಟ್ ಡೈರೆಕ್ಟರ್, ಕಿಮ್ಸ್ ಅಧ್ಯಕ್ಷರು, ಆರ್ಗನ್ ಡೊನೇಷನ್ ಡಿಪಾರ್ಟ್ಮೆಂಟ್ ಭಾಗಿಯಾಗಿತ್ತು.