ಕನ್ನಡ ಚಿತ್ರರಂಗದಲ್ಲಿ ಪೋಸ್ಟರ್ ಹಾಗೂ ಯುವ ನಟ, ನಟಿಯರ ವಿಚಾರಕ್ಕೆ ಸೌಂಡ್ ಮಾಡುತ್ತಿರುವ ಚಿತ್ರ 'ಭೀಮ'. ಸಲಗ ಚಿತ್ರದ ಸಕ್ಸಸ್ ಬಳಿಕ ದುನಿಯಾ ವಿಜಯ್ ಮತ್ತೆ ಆ್ಯಕ್ಷನ್ ಕಟ್ ಹೇಳುತ್ತಿರುವ ಮಾಸ್ ಸಿನಿಮಾ ಇದು. ಈಗಾಗಲೇ ಬೆಂಗಳೂರಿನ ಹೊರವಲಯದಲ್ಲಿ ಅರ್ಧದಷ್ಟು ಭೀಮ ಚಿತ್ರೀಕರಣ ನಡೆಸಿರೋ ನಟ - ನಿರ್ದೇಶಕ ವಿಜಯ್ ಹೊಸ ಪ್ರತಿಭೆಗಳಿಗೆ ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಾರೆ. ಈ ಚಿತ್ರದಲ್ಲಿ ಡ್ರಾಗನ್ ಪಾತ್ರ ಮಾಡುತ್ತಿರುವ ಮಣಿ, ಸುಧೀ, ಮಾಡೆಲ್ ಆಶಾ ಸೇರಿದಂತೆ ರಂಗಭೂಮಿ ಕಲಾವಿದರನ್ನು ಗುರುತಿಸಿ ತಮ್ಮ ಚಿತ್ರದಲ್ಲಿ ಅಭಿನಯ ಮಾಡಿಸುತ್ತಿದ್ದಾರೆ.
ಭೀಮ ಸಿನಿಮಾಗೆ ಅಶ್ವಿನಿ ಆಯ್ಕೆ:ಭೀಮ ಸಿನಿಮಾ ಸೆಟ್ಟೇರಿ ಬಹುದಿನಗಳಾದರೂ ಕೂಡ ವಿಜಯ್ ಜೋಡಿ ಯಾರಾಗ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿರಲಿಲ್ಲ. ಈ ಬಗ್ಗೆ ಅಭಿಮಾನಿಗಳು ಕುತೂಹಲಕಾರರಾಗಿದ್ದರು. ಪ್ರೇಮಿಗಳ ದಿನದಂದು ದುನಿಯಾ ವಿಜಯ್ ತಮ್ಮ ನಟಿಯನ್ನು ಪರಿಚಯಿಸಿದ್ದಾರೆ. ರಂಗಭೂಮಿ ಹಿನ್ನೆಲೆ ಇರುವ ಅಶ್ವಿನಿ ಎ ಅವರು ವಿಜಯ್ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಅಶ್ವಿನಿ ಅವರು ಭೀಮ ಶೂಟಿಂಗ್ನಲ್ಲಿ ಭಾಗವಹಿಸಿರೋ ಕೆಲ ಚಿತ್ರಗಳನ್ನು ಚಿತ್ರತಂಡ ರಿವೀಲ್ ಮಾಡಿದೆ. ಪ್ರತಿಭೆಗೆ ಹೆಚ್ಚು ಸ್ಕೋಪ್ ಕೊಡುವ ಮೂಲಕ ಆಡಿಷನ್ನಲ್ಲಿ ಅಶ್ವಿನಿ ಅವರನ್ನು ಆಯ್ಕೆ ಮಾಡಲಾಗಿದೆ.
ಈ ಬಗ್ಗೆ ಮಾತನಾಡಿರೋ ಅಶ್ವಿನಿ, ಈಗಾಗಲೇ ನಾನು ಶೂಟಿಂಗ್ನಲ್ಲಿ ಭಾಗಿ ಆಗಿದ್ದೇನೆ. ಒಂದು ವರ್ಷದ ಹಿಂದೆಯೇ ಭೀಮ ಸಿನಿಮಾಗೆ ನನ್ನನ್ನು ಆಯ್ಕೆ ಮಾಡಿದ್ದರು. ಆದರೆ, ಯಾರಿಗೂ ಹೇಳಿರಲಿಲ್ಲ. ಪ್ರೇಮಿಗಳ ದಿನದಂದು ಅನೌನ್ಸ್ ಮಾಡಿರುವ ಬಗ್ಗೆ ನನಗೆ ಖುಷಿ ಇದೆ. ವಿಜಯ್ ಸರ್ ಅವರ ನಿರ್ದೇಶನದಲ್ಲಿ ನನ್ನ ಸಿನಿಮಾ ವೃತ್ತಿಜೀವನವನ್ನು ಪ್ರಾರಂಭಿಸಲು ಮತ್ತು ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುವ ವಿಚಾರದಲ್ಲಿ ಬಹಳ ಉತ್ಸುಕಳಾಗಿದ್ದೇನೆ.
ನಾನು ಎಂಬಿಎ ಓದುತ್ತಿದ್ದೇನೆ, ಕಳೆದ ಮೂರೂವರೆ ವರ್ಷಗಳಿಂದ ರಂಗಭೂಮಿ ತತ್ಕಾಲ್ ಗುಂಪು ಮತ್ತು ಅಭಿನಯ ತರಂಗದ ಅಡಿಯಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದೇನೆ ಅಂತಾ ಹೇಳಿದರು. ನಾನು ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳಲು ಬಯಸುತ್ತಿದ್ದೆ, ಹೀಗಾಗಿ ನಾನು ಇಲ್ಲಿದ್ದೇನೆ. ಭೀಮ ಸಿನಿಮಾದಲ್ಲಿ ನನಗೆ ಅವಕಾಶ ಸಿಕ್ಕಿರೋದು ನಿಜವಾಗಿಯೂ ದೊಡ್ಡ ವಿಷಯ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.