ಕರ್ನಾಟಕ

karnataka

ETV Bharat / entertainment

60ನೇ ವಯಸ್ಸಿಗೆ ಎರಡನೇ ಮದುವೆಯಾದ ಆಶಿಶ್ ವಿದ್ಯಾರ್ಥಿ: ಮನಸ್ಸು ತುಂಬಿ ಹರಿಸಿದ ಮೊದಲ ಪತ್ನಿ - ಎರಡನೇ ಮದುವೆಯಾದ ಆಶಿಶ್ ವಿದ್ಯಾರ್ಥಿ

ಖ್ಯಾತ ನಟ ಆಶಿಶ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿಗೆ ಎರಡನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು ಅವರ ಮೊದಲ ಪತ್ನಿ ರಾಜೋಶಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.

Ashish Vidyarthi's ex-wife Rajoshi shares cryptic note as new pictures of his second marriage emerges
ಮೊದಲ ಪತ್ನಿ ರಾಜೋಶಿ, ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ

By

Published : May 26, 2023, 6:29 PM IST

ಹೈದರಾಬಾದ್: ಗುರುವಾರಷ್ಟೇ ಎರಡನೇ ಮದುವೆಯಾದ ಖ್ಯಾತ ನಟ ಆಶಿಶ್ ವಿದ್ಯಾರ್ಥಿ ಬಗ್ಗೆ ಮೊದಲ ಪತ್ನಿ ನಟಿ, ರಾಜೋಶಿ (ಅಕಾ ಪಿಲೂ ವಿದ್ಯಾರ್ಥಿ) ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ವೊಂದನ್ನು ಮಾಡುವ ಮೂಲಕ ನೋವು ತೋಡಿಕೊಂಡಿದ್ದಾರೆ. ಆಶಿಶ್ ವಿದ್ಯಾರ್ಥಿಯು ತಮ್ಮ 60ನೇ ವಯಸ್ಸಿನಲ್ಲಿ ಅಸ್ಸೋಂನ ಫ್ಯಾಷನ್ ಉದ್ಯಮಿ ರೂಪಾಲಿ ಬರೋವಾ ಅವರನ್ನು ವಿವಾಹವಾಗಿದ್ದು, ಅವರ ಫೋಟೋ ಇದೀಗ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ನೆಟಿಜನ್​​ಗಳು ಕೂಡ ಈ ಜೋಡಿಯ ಫೋಟೋ ಕಂಡು ತರಹೇವಾರಿ ಕಾಮೆಂಟ್ ಮಾಡುವ ಮೂಲಕ ಶುಭಾಶಯ ಕೋರುತ್ತಿದ್ದಾರೆ. ಈ ಸಾಲಿಗೆ ಇದೀಗ ಆಶಿಶ್ ವಿದ್ಯಾರ್ಥಿ ಅವರ ಮೊದಲ ಪತ್ನಿ ರಾಜೋಶಿ ಕೂಡ ಸೇರಿಕೊಂಡಿದ್ದಾರೆ.

ಮೊದಲ ಪತ್ನಿ ರಾಜೋಶಿ, ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ

ಮಾಜಿ ಪತಿ ಆಶಿಶ್ ವಿದ್ಯಾರ್ಥಿ ಅವರ ಹೆಸರು ಹೇಳದೇ ಪರೋಕ್ಷವಾಗಿ ಎರಡನೇ ಮದುವೆ ಕುರಿತು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ಪೋಸ್ಟ್​ನಲ್ಲಿ ಮಾರ್ಮಿಕ ಮಾತುಗಳ ಮೂಲಕ ತಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಇವರ ಪೋಸ್ಟ್​ ಇದೀಗ ಕುತೂಹಲಕ್ಕೆ ದಾರಿ ಮಾಡಿಕೊಟ್ಟಿದೆ.

'ನಿಮಗೆ ನೋವುಂಟಾಗುತ್ತದೆ ಎಂಬ ವಿಚಾರ ಗೊತ್ತಿದ್ದರೆ ಒಳ್ಳೆಯ ವ್ಯಕ್ತಿಯಾದವರು ಆ ತಪ್ಪನ್ನು ಮಾಡುವುದಿಲ್ಲ, ನೆನಪಿನಲ್ಲಿಡಿ' ಎಂದು ಮೊದಲ ಪೋಸ್ಟ್​ನಲ್ಲಿ ಈ ರೀತಿಯಾಗಿ ಬರೆದುಕೊಂಡಿದ್ದಾರೆ. ಮತ್ತೊಂದು ಪೋಸ್ಟ್​ನಲ್ಲಿ 'ಅತಿಯಾದ ಆಲೋಚನೆ ಮತ್ತು ಅನುಮಾನವು ಇದೀಗ ನಿಮ್ಮ ಮನಸ್ಸಿನಾಳದಿಂದ ಹೊರಬೀಳಲಿ. ಸ್ಪಷ್ಟತೆ ಗೊಂದಲವನ್ನು ಬದಲಾಯಿಸಬಹುದು. ನಿಮ್ಮ ಜೀವನವು ಪ್ರಶಾಂತತೆಯಿಂದ ತುಂಬಿರಲಿ. ನಿಮ್ಮ ಹೋರಾಟದ ಪ್ರತಿಫಲ ನಿಮ್ಮ ಮುಂದಿದೆ ಎಂದು ರಾಜೋಶಿ ಬರೆದುಕೊಂಡಿದ್ದಾರೆ.

ಮದುವೆಯಾದ ಸಂಭ್ರಮದಲ್ಲಿ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ

ರೂಪಾಲಿ ಬರೋವಾ ಅವರು ಕೋಲ್ಕತ್ತಾದಲ್ಲಿ ಹಲವು ಫ್ಯಾಷನ್ ಮಳಿಗೆಗಳನ್ನು ಹೊಂದಿದ್ದು ಆಶಿಶ್ ವಿದ್ಯಾರ್ಥಿ ಇತ್ತೀಚೆಗೆ ಅವರೊಂದಿಗೆ ಸ್ನೇಹ ಬೆಳೆಸಿದ್ದರು. ಸ್ನೇಹ ಕೆಲ ದಿನಗಳ ಬಳಿಕ ಪ್ರೀತಿಗೆ ತಿರುಗಿತ್ತು. ಆ ಬಳಿಕ ಮದುವೆ ಬಗ್ಗೆ ಪರಸ್ಪರ ಮಾತನಾಡಿಕೊಂಡಿದ್ದರು. ಅಂದುಕೊಂಡಂತೆ ಈ ಜೋಡಿ ಇಂದು ಗುರುವಾರ ಸರಳವಾಗಿ ಹಸೆಮಣೆ ಏರಿತು. ಆಶಿಶ್ ವಿದ್ಯಾರ್ಥಿ ಅವರು ಇದಕ್ಕೂ ಮುನ್ನ 20 ವರ್ಷಗಳ ಹಿಂದೆ ಬಂಗಾಳಿ ನಟಿ ರಾಜೋಶಿ ಅವರನ್ನು ಮದುವೆಯಾಗಿದ್ದರು. ಕಾರಣಾಂತರಗಳಿಂದ ಮದುವೆ ಮುರಿದು ಬಿದ್ದಿತ್ತು.

ರಾಜೋಶಿ ಅವರು ಪ್ರಸಿದ್ಧ ರಂಗಭೂಮಿ ಕಲಾವಿದೆಯಾಗಿದ್ದಲ್ಲದೇ ಗಾಯಕಿಯೂ ಆಗಿದ್ದಾರೆ. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಆದರೆ, ಕೆಲವು ವರ್ಷಗಳ ಹಿಂದೆ, ಭಿನ್ನಾಭಿಪ್ರಾಯದಿಂದ ದಂಪತಿ ಬೇರೆ ಬೇರೆಯಾಗಿದ್ದರು. ಅಂದಿನಿಂದ ಒಂಟಿಯಾಗಿದ್ದ ಆಶಿಶ್ ವಿದ್ಯಾರ್ಥಿ ಗುರುವಾರ ಮತ್ತೆ ಎರಡನೇ ಮದುವೆಯಾಗಿದ್ದಾರೆ. ಸದ್ಯ ಆಶಿಶ್ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಅವರು ದೇಶಾದ್ಯಂತ ಸಂಚರಿಸುತ್ತಿದ್ದು, ಆಗಾಗ ಉತ್ತಮ ವ್ಲಾಗ್‌ಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.

ಮದುವೆಯಾದ ಸಂಭ್ರಮದಲ್ಲಿ ಆಶಿಶ್ ವಿದ್ಯಾರ್ಥಿ ಮತ್ತು ರೂಪಾಲಿ

ಆಶಿಶ್ ವಿದ್ಯಾರ್ಥಿ ಕನ್ನಡ ಸೇರಿದಂತೆ ಸುಮಾರು 11 ಭಾಷೆಗಳಲ್ಲಿ ಖಳನಟನಾಗಿ, ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ, ಪೋಷಕ ನಟರಾಗಿ ಬಣ್ಣ ಹಚ್ಚಿದ್ದಾರೆ. ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಕೂಡ ಲಭಿಸಿವೆ. ಕನ್ನಡದಲ್ಲಿ ದುರ್ಗಿ, ಕೋಟಿಗೊಬ್ಬ, ಎಕೆ-47, ವಂದೇ ಮಾತರಂ, ಸೈನಿಕ, ನಂದಿ, ಆಕಾಶ್​, ನಮ್ಮಣ್ಣ, ತಂದೆಗೆ ತಕ್ಕ ಮಗ, ಸುಂಟರಗಾಳಿ ಸೇರಿದಂತೆ ಹಲವು ಸಿನಿಮಾಗಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ದಾರೆ. ಅವರು ಇತ್ತೀಚೆಗೆ ‘ರೈಟರ್ ಪದ್ಮಭೂಷಣ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: 60ನೇ ವಯಸ್ಸಿನಲ್ಲಿ ಮರುಮದುವೆಯಾದ ಖಳನಟ ಆಶಿಶ್ ವಿದ್ಯಾರ್ಥಿ!

ABOUT THE AUTHOR

...view details