ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಹೈವೋಲ್ಟೇಜ್ ವಿಶ್ವಕಪ್ ಪಂದ್ಯ ನಡೆಯುತ್ತಿದೆ. ಐಸಿಸಿ ವಿಶ್ವಕಪ್ ಕದನಕ್ಕೂ ಮುನ್ನ, ಖ್ಯಾತ ಗಾಯಕ ಅರಿಜಿತ್ ಸಿಂಗ್ ತಮ್ಮ ಕಂಠಸಿರಿಯಿಂದ ಮೈದಾನದಲ್ಲಿ ಮೋಡಿ ಮಾಡಿದ್ದಾರೆ. ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂದು ಕರೆಯಲ್ಪಡುವ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೊಳಗಿದ ಗಾಯನದ ಕ್ಲಿಪ್ಗಳು ಆನ್ಲೈನ್ನಲ್ಲಿ ವೈರಲ್ ಆಗುತ್ತಿವೆ.
ಇಂದು ಮಧ್ಯಾನ್ 2 ಗಂಟೆಗೆ ಐಸಿಸಿ ವಿಶ್ವಕಪ್ 2023ರ 12ನೇ ಪಂದ್ಯ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ. ಹೈವೋಲ್ಟೇಜ್ ಪಂದ್ಯಕ್ಕೆ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಸಾಕ್ಷಿಯಾಗಿದ್ದು, ಭಾರತ ಗೆಲ್ಲಲು ಪ್ರಾರ್ಥನೆ ಮುಂದುವರಿದಿದೆ. ಪಂದ್ಯ ಆರಂಭಕ್ಕೂ ಮುನ್ನ ಖ್ಯಾತ ಗಾಯಕ ಅರಿಜಿತ್ ಸಿಂಗ್ ಭಾವಪೂರ್ಣ ಮಧುರ ಗೀತೆಗಳೊಂದಿಗೆ ಮೈದಾನದ ವೈಭವವನ್ನು ಹೆಚ್ಚಿಸಿದರು.
ಅರಿಜಿತ್ ಸಿಂಗ್, ಸಂಗೀತ ಸಂಯೋಜಕ - ಗಾಯಕ ಶಂಕರ್ ಮಹಾದೇವನ್ ಮತ್ತು ಗಾಯಕರಾದ ಸುನಿಧಿ ಚೌಹಾಣ್ ಮತ್ತು ಸುಖ್ವಿಂದರ್ ಸಿಂಗ್ ಜೊತೆ ಸೇರಿ ಅದ್ಭುತ ಪ್ರದರ್ಶನ ನೀಡಿದರು. ಮನ ಸೆಳೆಯುವ ಗಾಯನ ಮೂಲಕ ಕಿಕ್ಕಿರಿದ ಕ್ರೀಡಾಂಗಣವನ್ನು ಮಂತ್ರಮುಗ್ಧಗೊಳಿಸಿದರು. ಬಹುನಿರೀಕ್ಷಿತ ಪಂದ್ಯ ಭಾರತೀಯ ಚಿತ್ರರಂಗದ ಖ್ಯಾತ ಗಾಯಕರಾದ ಅರಿಜಿತ್ ಸಿಂಗ್, ಶಂಕರ್ ಮಹಾದೇವನ್ ಮತ್ತು ಸುನಿಧಿಯವರ ಭಾವಪೂರ್ಣ 'ವಂದೇ ಮಾತರಂ' ಮೂಲಕ ಪ್ರಾರಂಭವಾಯಿತು.