'ದಿ ಕೇರಳ ಸ್ಟೋರಿ' ಸಿನಿಮಾ ವಿರುದ್ಧ ವಿವಾದ ಸೃಷ್ಟಿಯಾಗಿದೆ. ಹಲವೆಡೆ ಆಕ್ರೋಶ ವ್ಯಕ್ತವಾಗುತ್ತಿದೆ. ಸಿನಿಮಾ ಬಿಡುಗಡೆ ಮಾಡದಂತೆ ಹಲವರು ಪಟ್ಟು ಹಿಡಿದಿದ್ದಾರೆ. ಸತ್ಯಾಂಶ ಅನಾವರಣಗೊಳಿಸಲಿರುವ ಸಿನಿಮಾ ತೆರೆ ಕಾಣಲೇಬೇಕೆಂಬ ಹಠ ಮತ್ತೊಂದಿಷ್ಟು ಮಂದಿಯದ್ದು.
ವಿವಾದದ ನಡುವೆಯೇ ಕೇರಳದ ಮಸೀದಿಯೊಂದರಲ್ಲಿ ಹಿಂದೂ ಸಂಪ್ರದಾಯಗಳೊಂದಿಗೆ ನಡೆದಿರುವ ಮದುವೆ ವಿಡಿಯೋ ವೈರಲ್ ಆಗುತ್ತಿದೆ. ಆಸ್ಕರ್ ವಿಜೇತ ಸಂಗೀತಗಾರ ಎ.ಆರ್ ರೆಹಮಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.
ರೆಹಮಾನ್ ಟ್ವೀಟ್: ತಮ್ಮ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿರುವ ಸಂಗೀತ ಮಾಂತ್ರಿಕ, ''ಮಾನವೀಯತೆಯ ಮೇಲಿನ ಪ್ರೀತಿಯು ಬೇಷರತ್ತು ಮತ್ತು ಗುಣಪಡಿಸುವಂತಿರಬೇಕು" ಎಂದು ತಿಳಿಸಿದ್ದಾರೆ. ನಿನ್ನೆ ಈ ಮದುವೆಯ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಹಂಚಿಕೊಂಡಿದ್ದರು. "ಇಲ್ಲಿ ಮತ್ತೊಂದು ಕೇರಳ ಕಥೆ" ಎಂಬ ಶೀರ್ಷಿಕೆ ಕೊಟ್ಟಿದ್ದರು. ಇದನ್ನೇ ಗಾಯಕ ರೆಹಮಾನ್ ಹಂಚಿಕೊಂಡು ಮಾನವೀಯತೆ ಬಗ್ಗೆ ಮಾತನಾಡಿದ್ದಾರೆ.
2020ರ ಘಟನೆ: 2020ರಲ್ಲಿ ಮಸೀದಿಯೊಳಗೆ ನಡೆದ ಅಂಜು ಮತ್ತು ಶರತ್ ಜೋಡಿಯ ಹಿಂದೂ ವಿವಾಹದ ಪೋಸ್ಟ್ ಅನ್ನು ಎ.ಆರ್ ರೆಹಮಾನ್ ಹಂಚಿಕೊಂಡಿದ್ದಾರೆ. ಮದುವೆಯನ್ನು ಹಿಂದೂ ಸಂಪ್ರದಾಯದಂತೆ ನಡೆಸಲಾಗಿತ್ತು. ಮದುವೆಗೆ ಹಣದ ಕೊರತೆಯಿಂದಾಗಿ ವಧುವಿನ ತಾಯಿ ಮಸೀದಿ ಸಮಿತಿಯನ್ನು ಸಂಪರ್ಕಿಸಿದ ನಂತರ ಹಿಂದೂ ಪಾದ್ರಿಯೊಬ್ಬರು ಮಸೀದಿಯಲ್ಲಿ ವಿವಾಹವನ್ನು ನೆರವೇರಿಸಿದರು. ಕುಟುಂಬದ ಮುಖ್ಯಸ್ಥನನ್ನು ಕಳೆದುಕೊಂಡ ಕುಟುಂಬಕ್ಕೆ ಸಂಪನ್ಮೂಲಗಳ ಕೊರತೆಯಿತ್ತು. ಆ ಸಮಯದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈ ವಿವಾಹವನ್ನು "ಕೇರಳದ ಒಗ್ಗಟ್ಟಿನ ಉದಾಹರಣೆ" ಎಂದು ಕರೆದಿದ್ದರು. "ನವವಿವಾಹಿತರು, ಕುಟುಂಬಗಳು, ಮಸೀದಿ ಅಧಿಕಾರಿಗಳು ಮತ್ತು ಜನರಿಗೆ ಅಭಿನಂದನೆಗಳು" ಎಂದು ಅವರು ಟ್ವೀಟ್ ಮಾಡಿದ್ದರು.