BAD - ಟೈಟಲ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಸಿನಿಮಾ. ರೋಮಿಯೋ ಖ್ಯಾತಿಯ ಪಿ ಸಿ ಶೇಖರ್ ನಿರ್ದೇಶನದ ಬ್ಯಾಡ್ ಚಿತ್ರ ಹಲವು ವಿಚಾರಗಳಿಗೆ ಸಿನಿ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಸಾಕಷ್ಟು ಜನಪ್ರಿಯ ಧಾರಾವಾಹಿಗಳು ಹಾಗೂ ಇತ್ತೀಚೆಗೆ ತೆರೆಕಂಡ "ನಾನು, ಅದು ಮತ್ತು ಸರೋಜ" ಚಿತ್ರದಲ್ಲಿ ಅಭಿನಯಿಸಿರುವ ನಟಿ ಅಪೂರ್ವ ಭಾರದ್ವಾಜ್ ಈ ಚಿತ್ರದಲ್ಲಿ ಸ್ಪೆಷಲ್ ಪಾತ್ರ ಮಾಡುತ್ತಿದ್ದಾರೆ.
ಕಾಮ ಪ್ರತಿನಿಧಿಸುವ ಪಾತ್ರದಲ್ಲಿ ಅಪೂರ್ವ:ಹೌದು, "BAD" ಚಿತ್ರದಲ್ಲಿ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಸೇರಿ ಅರಿಷಡ್ವರ್ಗಗಳನ್ನು ಪ್ರತಿನಿಧಿಸುವ ಆರು ಪಾತ್ರಗಳಿವೆ ಎಂದು ಚಿತ್ರತಂಡ ಈ ಮೊದಲೇ ತಿಳಿಸಿತ್ತು. ಆ ಪೈಕಿ ಕಾಮ ಎಂಬ ವರ್ಗವನ್ನು ಅನು ಎಂಬ ಪಾತ್ರದ ಮೂಲಕ ತೋರಿಸಲಾಗುವುದು. ಈ ಪಾತ್ರದಲ್ಲಿ ಅಪೂರ್ವ ಭಾರದ್ವಾಜ್ ಕಾಣಿಸಿಕೊಳ್ಳುತ್ತಿದ್ದಾರೆ.
'ಈ ಪಾತ್ರಕ್ಕೆ ಅಪೂರ್ವ ಭಾರದ್ವಾಜ್ ಸೂಕ್ತ':ನಮ್ಮ ಚಿತ್ರದಲ್ಲಿ ಕಾಮವನ್ನು ಪ್ರೀತಿಗೆ ಬದಲಾಯಿಸಿ ತೋರಿಸಲಾಗುತ್ತಿದೆ. ಚಿಕ್ಕ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡು, ತಂದೆಯ ಆಸರೆಯಲ್ಲಿ ಬೆಳೆದ ಹುಡುಗಿ ಅನು. ತಾಯಿ ಪ್ರೀತಿ ಕಾಣದ ಈ ಹುಡುಗಿಗೆ ಯಾರ ಬಳಿ ಹೇಗೆ ಪ್ರೀತಿ ವ್ಯಕ್ತ ಪಡಿಸಬೇಕೆಂಬುದು ತಿಳಿದಿರುವುದಿಲ್ಲ. ಈ ಪಾತ್ರಕ್ಕೆ ಮಾತು ಕಡಿಮೆ. ಕಣ್ಣಿನಲ್ಲೇ ಭಾವನೆಗಳನ್ನು ಹೇಳುವ ಪಾತ್ರವಿದು. ಗುಂಗುರು ಕೂದಲುಳ್ಳ ಸಹಜ ಸುಂದರಿ ಪಾತ್ರವಿದು. ಹಾಗಾಗಿ, ಅಪೂರ್ವ ಭಾರದ್ವಾಜ್ ಅವರ ಹಿಂದಿನ ಧಾರಾವಾಹಿ ಹಾಗೂ ಚಿತ್ರಗಳನ್ನು ನೋಡಿ, ಈ ಪಾತ್ರಕ್ಕೆ ಇವರೇ ಸರಿ ಹೊಂದುತ್ತಾರೆ ಎಂದು ಅವರನ್ನು ಆಯ್ಕೆ ಮಾಡಿಕೊಂಡಿರುವುದಾಗಿ ನಿರ್ದೇಶಕ ಪಿ ಸಿ ಶೇಖರ್ ತಿಳಿಸಿದ್ದಾರೆ. ಅಪೂರ್ವ ಅವರು ಬಹಳ ಅದ್ಭುತವಾಗಿ ಅಭಿನಯಿಸಿದ್ದಾರೆ ಹಾಗೂ ಚಿತ್ರದಲ್ಲಿ ಅವರ ಪಾತ್ರ ಬರುವ ಕಡೆಯೆಲ್ಲಾ ಪಿಂಕ್ (ಗುಲಾಬಿ ಬಣ್ಣ) ಶೇಡ್ನಲ್ಲಿ ಚಿತ್ರಿಸಲಾಗಿದೆ ಎನ್ನುತ್ತಾರೆ ನಿರ್ದೇಶಕರು.