ಬೆಂಗಳೂರು: ಪುನೀತ್ ರಾಜ್ ಕುಮಾರ್ ಅಗಲಿ ಇಂದಿಗೆ ವರ್ಷ ಪೂರೈಸಿದೆ. ಜನಸಾಗರ ತಮ್ಮ ನೆಚ್ಚಿನ ಅಪ್ಪುವಿನ ಅಗಲಿಕೆಯ ದುಖಃದಿಂದ ಇನ್ನೂ ಹೊರಬಂದಿಲ್ಲ. ಅಭಿಮಾನಿಗಳ ಮನದಲ್ಲಿ ಅಜರಾಮರಾಗಿರುವ ಪುನೀತ್ ರೀಲ್ನಲ್ಲಿ ಮಾತ್ರವಲ್ಲ, ರಿಯಲ್ ಲೈಫ್ನಲ್ಲೂ ರಿಯಲ್ ಹೀರೋವಾಗಿ ಮಿಂಚಿದ್ದವರು.
ತಮ್ಮ ನಿಜ ಜೀವನದಲ್ಲಿ ಅಪ್ಪು ಹಲವು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಮಾಜ ಮುಖಿಯಾಗಿದ್ದರು. ಸಮಾಜಮುಖಿ ಸೇವೆಯಿಂದಲೇ ಪುನೀತ್ ಜನಮೆಚ್ಚುಗೆ ಗಳಿಸಿದ್ದರು. ಸಂಕಷ್ಟದಲ್ಲಿರುವವರಿಗೆ ಸದಾ ಹೆಗಲು ಕೊಡಲು ಮುಂದಾಗುತ್ತಿದ್ದ ಪವರ್ ಸ್ಟಾರ್ ನಿಜವಾಗಿಯೂ ನಿಜ ಜೀವನದಲ್ಲೂ ನಾಯಕನಾಗಿ ಜೀವಿಸಿದ್ದವರು. ಅಪ್ಪು ಹೃದಯ ವೈಶಾಲ್ಯವುಳ್ಳ ಹೃದಯವಂತ ಎಂಬುದನ್ನು ತೋರಿಸಿಕೊಟ್ಟಿದ್ದರು.
ಕೋವಿಡ್ ಸಂದರ್ಭ ಅಪ್ಪು ಸಹಾಯ ಹಸ್ತ: ತಾವು ಮಾಡಿರುವ ಪರೋಪಕಾರದ ಬಗ್ಗೆ ಎಲ್ಲೂ ಬಹಿರಂಗವಾಗಿ ಹೇಳಲು ಇಚ್ಛಿಸದ ಪುನೀತ್ ಸಾಕಷ್ಟು ಜನರಿಗೆ ಸಹಾಯವನ್ನು ಮಾಡಿದ್ದಾರೆ. ದೇಶ ಕೋವಿಡ್ ಸಂಕಷ್ಟದಲ್ಲಿದ್ದಾಗ ಅಪ್ಪು ಸಿಎಂ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದರು. ಹಣದ ಸಹಾಯದ ಜೊತೆಗೆ ಕೋವಿಡ್ ಸಂದರ್ಭದಲ್ಲಿ ಜನಜಾಗೃತಿ ಮೂಡಿಸುವಲ್ಲಿ ಅಪ್ಪು ಪ್ರಮುಖ ಪಾತ್ರ ವಹಿಸಿದ್ದರು. ತಮ್ಮ ಅಭಿಮಾನಿಗಳಿಗೂ ಸಿಎಂ ಕೋವಿಡ್ ಪರಿಹಾರ ನಿಧಿಗೆ ಕೊಡುಗೆ ನೀಡುವಂತೆ ಕರೆ ನೀಡಿದ್ದರು.
ಎರಡನೇ ಅಲೆ ವೇಳೆ ಪುನೀತ್ ಬೆಂಗಳೂರು ಪೊಲೀಸರ ಜೊತೆಗೂಡಿ ಕೋವಿಡ್ ಮುಂಜಾಗ್ರತೆ ಬಗ್ಗೆ ವಿಡಿಯೋ ಸಂದೇಶ ನೀಡಿದ್ದರು. ಕೋವಿಡ್ ಸಂದರ್ಭ ಕೆಲಸ ಕಳೆದುಕೊಂಡ ಸಿನಿಮಾ ಇಂಡಸ್ಟ್ರಿ ಸಿಬ್ಬಂದಿಗೆ ಮನಸಾರೆ ಸಹಾಯ ಹಸ್ತ ಚಾಚಿದ್ದರು.
ನೆರೆ ಸಂಸತ್ರಸರ ನೆರವಿಗೆ ದಾವಿಸಿದ್ದ ಅಪ್ಪು:ಪುನೀತ್ ರಾಜ್‍ಕುಮಾರ್ 2019ರಲ್ಲಿ ರಾಜ್ಯ ಭೀಕರ ಪ್ರವಾಹಕ್ಕೆ ತುತ್ತಾದಾಗ ಸಿಎಂ ವಿಪತ್ತು ಪರಿಹಾರ ನಿಧಿಗೆ 5 ಲಕ್ಷ ರೂ. ದೇಣಿಗೆ ನೀಡಿ ತಮ್ಮ ಸಹಾಯ ಹಸ್ತ ಚಾಚಿದ್ದರು. ಆ ಸಂದರ್ಭ ಉತ್ತರ ಕರ್ನಾಟಕ ಭಾಗ ಭಾರೀ ನೆರೆಗೆ ಮುಳುಗಿ ಹೋಗಿತ್ತು. ಈ ವೇಳೆ ಪುನೀತ್ ನೆರೆ ಸಂತ್ರಸ್ತರ ನೆರವಿಗೆ ಬಂದಿದ್ದರು. ಇದು ಅಪ್ಪುವಿನ ಸಹೃದಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. 2018ರಲ್ಲಿ ವರುಣನ ಆರ್ಭಟಕ್ಕೆ ಕೇರಳ ಅಕ್ಷರಶಃ ತತ್ತರಿಸಿ ಹೋಗಿತ್ತು. ಹೆಚ್ಚಿನ ಜನರು ಮನೆಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದರು. ನಿರಾಶ್ರಿತರ ನೋವು ಅರಿತ ಅಪ್ಪು ನೆರೆ ರಾಜ್ಯ ಕೇರಳ ಸಿಎಂ ನಿಧಿಗೆ 5 ಲಕ್ಷ ರೂ ನೀಡಿ ಹೃದಯ ವೈಶಾಲ್ಯ ಮೆರೆದಿದ್ದರು.
ಪುನೀತ್ ರಾಜ್ ಕುಮಾರ್ 26 ಅನಾಥಾಶ್ರಮ, 16 ವೃದ್ಧಾಶ್ರಮ ಹಾಗೂ 19 ಗೋಶಾಲೆಗಳಿಗೆ ಆರ್ಥಿಕ ನರವನ್ನೂ ನೀಡುತ್ತಿದ್ದರು. ತಾನು ಹಾಡುತ್ತಿದ್ದ ಹಾಡಿಗೆ ಬಂದ ಹಣವನ್ನು ಅಪ್ಪು ದಾನ ಮಾಡುತ್ತಿದ್ದರು. ಇದರ ಜೊತೆಗೆ ಆಗಾಗ ಕನ್ನಡ ಮಾಧ್ಯಮ ಶಾಲೆಗಳಿಗೂ ನೆರವಿನ ಹಸ್ತ ಚಾಚುತ್ತಿದ್ದರು.