ಬೆಂಗಳೂರು: ಇಂದು ಡಾ. ಪುನೀತ್ ರಾಜಕುಮಾರ್ ಅವರ ಪ್ರಥಮ ಪುಣ್ಯತಿಥಿ. ಬಾಲನಟನಾಗಿ ತೆರೆಗೆ ಬಂದ ಕನ್ನಡದ ಪವರ್ ಸ್ಟಾರ್ ಕರುನಾಡಲ್ಲಿ ದೊಡ್ಡ ಇತಿಹಾಸವನ್ನೇ ನಿರ್ಮಿಸಿದ್ದಾರೆ. ಕೇವಲ ಆರು ತಿಂಗಳ ಮಗುವಾಗಿದ್ದಾಗಲೇ ಕನ್ನಡ ಚಿತ್ರದಲ್ಲಿ ಅಭಿನಯಿಸಿದ ಅಪ್ಪು ಕನ್ನಡನಾಡಿನ ಚಿತ್ರಪ್ರೇಮಿಗಳ ಮನಸ್ಸಿನಲ್ಲಿ ಶಾಶ್ವತವಾದ ನೆಲೆ ಕಂಡುಕೊಂಡಿದ್ದಾರೆ.
ವರನಟ ಡಾ.ರಾಜ್ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದ ಪ್ರೇಮದ ಕಾಣಿಕೆ ಚಿತ್ರದಲ್ಲಿ ಪುನೀತ್ ಅಭಿನಯಿಸಿದ್ದರು. ಅಭಿನಯ ಅಂದರೆ ಏನು ಎಂದು ತಿಳಿಯದ ಆರು ತಿಂಗಳ ಹಸುಗೂಸು ಚಿತ್ರರಂಗಕ್ಕೆ ಅರಿಯದೇ ಕಾಲಿಟ್ಟಿತ್ತು. ನಂತರವೂ ಅವರು ಚಿತ್ರಗಳಲ್ಲಿ ಅಭಿನಯಿಸಿದ್ದಕ್ಕಿಂತ ಪಾತ್ರಗಳಿಗೆ ಜೀವತುಂಬಿದ್ದೇ ಹೆಚ್ಚು. ಬಾಲ ಕಲಾವಿದನಾಗಿ ಅವರು ಪರಿಚಿತರಾಗಿದ್ದು `ಮಾಸ್ಟರ್ ಲೋಹಿತ್' ಅನ್ನುವ ಹೆಸರಿನಲ್ಲಿ. ಒಟ್ಟು 10ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಿಯಿಸಿ ಸೈ ಎನಿಸಿಕೊಂಡ ಪುನೀತ್ ರಾಜ್ಕುಮಾರ್ ಬೆಟ್ಟದ ಹೂವು ಚಿತ್ರದ ನಟನೆಗಾಗಿ ರಾಷ್ಟ್ರ ಪ್ರಶಸ್ತಿ ಕೂಡ ಪಡೆದರು.
1976ರಲ್ಲಿ ಪ್ರೇಮದ ಕಾಣಿಕೆ ಚಿತ್ರದಲ್ಲಿ ಅಪ್ಪು ತಂದೆ ವರನಟ ಡಾ.ರಾಜ್ಕುಮಾರ್, ಆರತಿ, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ ಜತೆ ಅಭಿನಯಿಸಿದರು. ಚಿತ್ರವನ್ನು ವಿ.ಸೋಮಶೇಖರ್ ನಿರ್ದೇಶಿಸಿದ್ದರು. ಆರು ತಿಂಗಳ ಮಗುವಿದ್ದಾಗ ಪುನೀತ್ ಅಭಿನಯಿಸಿದ ಚಿತ್ರ ಆಗಿನ ಸಮಯದಲ್ಲಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿತ್ತು.
ಸನಾದಿ ಅಪ್ಪಣ್ಣ ಚಿತ್ರ ವಿಜಯ್ ನಿರ್ದೇಶನದಲ್ಲಿ ಮೂಡಿಬಂತು. ಈ ಚಿತ್ರದಲ್ಲಿ ಸಹ ತಂದೆ ಡಾ. ರಾಜ್ಕುಮಾರ್ ಜೊತೆ ಪುನೀತ್ ಅಭಿನಯಿಸಿದ್ದರು. ಜಯಪ್ರದಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದ ಹಾಡೊಂದರಲ್ಲಿ ನಟಿಸುವ ಪುನೀತ್ ರಾಜ್ಕುಮಾರ್ ಡಾ.ರಾಜ್ ಪುತ್ರನಾಗಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ವಿ ಸೋಮಶೇಖರ್ ನಿರ್ದೇಶನದಲ್ಲಿ ಮೂಡಿಬಂದ ತಾಯಿಗೆ ತಕ್ಕ ಮಗ ಚಿತ್ರದಲ್ಲಿ ಅಪ್ಪು ಅಭಿನಯಿಸಿದ್ದರು. ಈ ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಪದ್ಮಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಬಾಲನಟನಾಗಿ ಅಪ್ಪು ಮಿಂಚಿದ್ದರು.
1980ರಲ್ಲಿ ತೆರೆಗೆ ಬಂದ ವಸಂತ ಗೀತ ಚಿತ್ರದಲ್ಲಿ ಡಾ.ರಾಜ್ಕುಮಾರ್, ಕೆಎಸ್ ಅಶ್ವಥ್, ಶ್ರೀನಿವಾಸ ಮೂರ್ತಿ ಅಭಿನಯಿಸಿದ್ದರು. ಈ ಚಿತ್ರ ದೊರೈ-ಭಗವಾನ್ ನಿರ್ದೇಶಿಸಿದ್ದರು. ಈ ಚಿತ್ರದಲ್ಲಿ ಸಹ ಪುನೀತ್ ರಾಜಕುಮಾರ್ ಡಾ. ರಾಜ್ ಪುತ್ರನ ಪಾತ್ರದಲ್ಲಿ ನಟಿಸಿದ್ದರು. ಭೂಮಿಗೆ ಬಂದ ಭಗವಂತ ಚಿತ್ರವನ್ನು ಕೆ.ಎಸ್.ಎಲ್ ಸ್ವಾಮಿ ನಿರ್ದೇಶಿಸಿದ್ದು, ಲೋಕೇಶ್ ಮತ್ತು ಲಕ್ಷ್ಮಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಕೃಷ್ಣನ ಪಾತ್ರದಲ್ಲಿ ಕಂಡಿದ್ದರು.
1971ರಲ್ಲಿ ತೆರೆಗೆ ಬಂದ ಭಾಗ್ಯವಂತ ಚಿತ್ರವನ್ನು ಬಿ.ಎಸ್ ರಂಗ ನಿರ್ದೇಶಿಸಿದ್ದರು. ಭಾಗ್ಯವಂತ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಜೊತೆ ಆರತಿ, ಜೈ ಜಗದೀಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದರು. ಡಾ. ರಾಜಕುಮಾರ್ ಕೂಡ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಅಪ್ಪು ಅಭಿನಯಿಸಿದ ಇನ್ನೊಂದು ಪ್ರಮುಖ ಚಿತ್ರ ಹೊಸ ಬೆಳಕು. ದೊರೈ-ಭಗವಾನ್ ನಿರ್ದೇಶನದಲ್ಲಿ ಮೂಡಿಬಂದ ಚಿತ್ರದಲ್ಲಿ ಡಾ. ರಾಜಕುಮಾರ್ ಜೊತೆ ಸರಿತಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದರು. ಲೇಖಕಿ ವಾಣಿ ಅವರ ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಪುನೀತ್ ಅವರು ಡಾ. ರಾಜ್ ಅಕ್ಕನ ಮಗ ಆಗಿ ನಟಿಸಿದ್ದರು.
1982ರಲ್ಲಿ ತೆರೆಗೆ ಬಂದ ಚಲಿಸುವ ಮೋಡಗಳು ಚಿತ್ರವನ್ನು ಸಿಂಗೀತಂ ಶ್ರೀನಿವಾಸ ರಾವ್ ನಿರ್ದೇಶನ ಮತ್ತು ಪಾರ್ವತಮ್ಮ ರಾಜಕುಮಾರ್ ನಿರ್ಮಾಣದಲ್ಲಿ ಮೂಡಿಬಂತು. ಡಾ. ರಾಜಕುಮಾರ್ ಜೊತೆ ಸರಿತಾ ಮತ್ತು ಅಂಬಿಕಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಪುನೀತ್ ಒಂದು ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಅಭಿನಯಕ್ಕೆ ಅವರಿಗೆ ‘ಅತ್ಯುತ್ತಮ ಬಾಲನಟ’ ಪ್ರಶಸ್ತಿ ಸರ್ಕಾರದಿಂದ ಲಭಿಸಿತ್ತು. ವಿಶೇಷ ಅಂದರೆ `ಕಾಣದಂತೆ ಮಾಯವಾದನು' ಎಂಬ ಗೀತೆಯನ್ನು ಅವರು ಈ ಚಿತ್ರಕ್ಕಾಗಿ ಹಾಡಿದ್ದರು.