ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ನಮ್ಮನ್ನೆಲ್ಲ ಅಗಲಿ ಹಲವು ದಿನಗಳು ಉರುಳಿವೆ. ಆದ್ರೆ ಅಪ್ಪು ಸ್ಮರಣೆ ಮುಂದುವರಿದಿದೆ. ಅವರ ನೆನಪು ಅಭಿಮಾನಿಗಳ ಮನದಲ್ಲಿ ಸದಾ ಜೀವಂತವಾಗಿದೆ. ಅವರ ಹೆಸರಿನಲ್ಲಿ ಸಮಾಜ ಸೇವೆ, ಕಾರ್ಯಕ್ರಮಗಳು ನಡೆಯುತ್ತಿವೆ.
ಅಪ್ಪು ಕಪ್...ಕನ್ನಡ ಚಿತ್ರರಂಗದ ಯುವರತ್ನ ಪುನೀತ್ ರಾಜ್‍ಕುಮಾರ್ ನೆನಪಿನಲ್ಲಿ ಆಯೋಜಿಸಲಾಗಿರುವ 'ಅಪ್ಪು ಕಪ್ ಸೀಸನ್ - 2' ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಲೀಗ್ ಲೋಗೋ ಬಿಡುಗಡೆ ಸಮಾರಂಭ ಇಂದು ನಡೆಯಿತು. ಬೆಂಗಳೂರಿನ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ನಲ್ಲಿ ಈ ಕಾರ್ಯಕ್ರಮ ನೆರವೇರಿದೆ.
ಲೋಗೋ ಅನಾವರಣಗೊಳಿಸಿದ ಪ್ರಕಾಶ್ ಪಡುಕೋಣೆ: ಭಾರತೀಯ ಬ್ಯಾಡ್ಮಿಂಟನ್ ದಂತಕಥೆ ಪ್ರಕಾಶ್ ಪಡುಕೋಣೆ ಲೋಗೋ ಅನಾವರಣ ಮಾಡಿ ಆಟಗಾರರಿಗೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪಿ. ರಾಜೇಶ್ ರೆಡ್ಡಿ, ವಾಣಿಜ್ಯ ಚಲನಚಿತ್ರ ಮಂಡಳಿ ಅಧ್ಯಕ್ಷರಾದ ಭಾ. ಮಾ. ಹರೀಶ್ ಉಪಸ್ಥಿತರಿದ್ದರು.
'ಅಪ್ಪು ಸ್ನೇಹಜೀವಿಯಾಗಿದ್ದರು': ಕಾರ್ಯುಕ್ರಮದಲ್ಲಿ ಮಾತನಾಡಿದ ಪ್ರಕಾಶ್ ಪಡುಕೋಣೆ, ನಟ ಪುನೀತ್ ರಾಜ್‍ಕುಮಾರ್ ಅವರು ನನಗೆ ವೈಯಕ್ತಿಕವಾಗಿ ಬಹಳ ಪರಿಚಿತರು. ಅವರು ಬಹಳ ಸ್ನೇಹಜೀವಿಯಾಗಿದ್ದರು. ಐದಾರು ವರ್ಷಗಳ ಹಿಂದೆ ನಾವೊಂದು ಈವೆಂಟ್ ಮಾಡಿದ್ದೆವು. ಒಂದೇ ಒಂದು ಫೋನ್ ಕಾಲ್ಗೆ ಬಂದು ನಮ್ಮ ಜೊತೆ ಎಕ್ಸಿಬ್ಯೂಷನ್ ಮ್ಯಾಚ್ ಆಡಿದ್ದರು. ಕನ್ನಡ ಚಿತ್ರರಂಗದಲ್ಲಿ ಬಹಳ ಮಂದಿ ಬ್ಯಾಡ್ಮಿಂಟನ್ ಆಡುತ್ತಾರೆ ಅನ್ನೋದನ್ನು ಕೇಳಿ ನನಗೆ ಖುಷಿ ಆಯ್ತು. ಅಪ್ಪು ಕಪ್ ಸ್ಯಾಂಡಲ್ವುಡ್ ಬ್ಯಾಡ್ಮಿಂಟನ್ ಹೀಗೆ ಮುಂದುವರೆಯಲಿ ಎಂದು ಶುಭ ಹಾರೈಸಿದರು.