ಕಪ್ಪು ಬಿಳುಪು ಕಾಲದಿಂದಲೂ ರಾಜ್ಯದಲ್ಲಿ ಬೃಹತ್ ಮಟ್ಟದ ಫಿಲ್ಮ್ ಸಿಟಿ ಆಗಬೇಕು ಅನ್ನೋ ಕನಸಿದೆ. ಹೊನ್ನಪ್ಪ ಭಾಗವತರ್ ಅವರಿಂದ ಹಿಡಿದು ಡಾ.ರಾಜ್ಕುಮಾರ್, ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್ ಅವರಂಥ ದಿಗ್ಗಜ ನಟರ ಆಸೆಯೂ ಇದೇ ಆಗಿತ್ತು. ಆದರೆ ಮೇರು ನಟರ ಕನಸು ಮಾತ್ರ ನನಸಾಗಿಲ್ಲ.
ಸಾಂಸ್ಕೃತಿಕ ನಗರಿ ಮೈಸೂರು ಚಿತ್ರರಂಗದವರಿಗೆ ಅಚ್ಚುಮೆಚ್ಚಿನ ಸ್ಥಳ. ಜಿಲ್ಲೆಯಲ್ಲಿ 250ಕ್ಕೂ ಅಧಿಕ ಪ್ರೇಕ್ಷಣೀಯ ಸ್ಥಳಗಳಿವೆ. ಇಂತಹ ಭವ್ಯ ಪರಂಪರೆಯುಳ್ಳ ಐತಿಹಾಸಿಕ ನಗರಿಯಲ್ಲಿ ಫಿಲ್ಮ್ ಸಿಟಿ ಸ್ಥಾಪಿಸಬೇಕೆಂಬುದು ಕನ್ನಡ ಚಿತ್ರರಂಗ ಮಾತ್ರವಲ್ಲದೇ ಬಹುಭಾಷಾ ಚಿತ್ರರಂಗದ ಗಣ್ಯರ ಅಭಿಪ್ರಾಯವೂ ಆಗಿದೆ.
ಮುಖ್ಯಮಂತ್ರಿಗೆ ಮನವಿ:ಈ ವಿಚಾರವಾಗಿ ಹಿರಿಯ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿ, ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್, ಪಿ. ಶೇಷಾದ್ರಿ, ಕೃಷ್ಣೇಗೌಡ ಅವರನ್ನು ಒಳಗೊಂಡ ಸಮಿತಿ ಸದಸ್ಯರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಆಗ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣದ ವಿಷಯ ಕೂಡ ಪ್ರಸ್ತಾಪವಾಗಿತ್ತು. ಸಿಎಂ ಈ ಕುರಿತು ರಿಪೋರ್ಟ್ ಸಿದ್ಧ ಮಾಡಿಕೊಡುವಂತೆ ಹೇಳಿದ್ದರು. ಇಂದು ಹಿರಿಯ ನಿರ್ದೇಶಕರಾದ ರಾಜೇಂದ್ರ ಸಿಂಗ್ ಬಾಬು ಅವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮೈಸೂರಿನಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವಂತೆ ಮನವಿ ಸಲ್ಲಿಸಿದರು.