ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023 (The Iconic Gold Awards 2023) ಅನ್ನು ಶನಿವಾರ ಸಂಜೆ ಆಯೋಜಿಸಲಾಗಿತ್ತು. ಪ್ರಶಸ್ತಿ ಪ್ರದಾನ ಸಮಾರಂಭ ಬಹಳ ಅದ್ಧೂರಿಯಾಗಿ ನಡೆದಿದ್ದು, ಕಾರ್ಯಕ್ರಮದಲ್ಲಿ ಕಿರುತೆರೆಯಿಂದ ಹಿರಿತೆರೆವರೆಗಿನ ತಾರೆಯರು ಒಟ್ಟಿಗೆ ಕಾಣಿಸಿಕೊಂಡರು.
ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023: ಮುಂಬೈನಲ್ಲಿ ನಿನ್ನೆ ಸಂಜೆ ನಡೆದ ಈ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್ ತಾರೆಯರಾದ ಅನುಪಮ್ ಖೇರ್, ದಿಯಾ ಮಿರ್ಜಾ, ಕಪಿಲ್ ಶರ್ಮಾ, ಕರಣ್ ಕುಂದ್ರಾ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು. ಈ ಸಮಾರಂಭದಲ್ಲಿ, 'ದಿ ಕಾಶ್ಮೀರ್ ಫೈಲ್ಸ್' ಚಿತ್ರಕ್ಕಾಗಿ ಅನುಪಮ್ ಖೇರ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು.
'ಮತ್ತೊಂದು ಅತ್ಯುತ್ತಮ ನಟ ಪ್ರಶಸ್ತಿ': ಐಕಾನಿಕ್ ಗೋಲ್ಡ್ ಅವಾರ್ಡ್ಸ್ 2023ರಲ್ಲಿ ಪ್ರಶಸ್ತಿ ಸ್ವೀಕರಿಸಿರುವ ಚಿತ್ರವನ್ನು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಸೂಟು ಬೂಟು ಧರಿಸಿ 68ರ ಹರೆದಲ್ಲೂ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಫೋಟೋದಲ್ಲಿ, ಅವರು ಕೈಯಲ್ಲಿ ಐಕಾನಿಕ್ ಗೋಲ್ಡ್ ಪ್ರಶಸ್ತಿಯನ್ನು ಹಿಡಿದಿದ್ದಾರೆ. ತಮ್ಮ ಫೋಟೋ ಹಂಚಿಕೊಂಡಿರುವ ಅವರು, 'ಕಾಶ್ಮೀರ್ ಫೈಲ್ಸ್'ಗಾಗಿ ಮತ್ತೊಂದು 'ಅತ್ಯುತ್ತಮ ನಟ ಪ್ರಶಸ್ತಿ' ಎಂಬ ಶೀರ್ಷಿಕೆಯನ್ನು ನೀಡಿದ್ದಾರೆ. ನಾನು ಆಶೀರ್ವದಿಸಲ್ಪಟ್ಟಿದ್ದೇನೆ, ಜಯಶಾಲಿಯಾಗಿರಿ ಎಂದು ಬರೆದುಕೊಂಡಿದ್ದಾರೆ.
ಅಭಿನಂದನೆ ತಿಳಿಸಿದ ಅಭಿಮಾನಿಗಳು: ಈ ಗೌರವಕ್ಕೆ ಪಾತ್ರರಾಗಿರುವ ನಟ ಅನುಪಮ್ ಖೇರ್ ಅವರಿಗೆ ಅಭಿಮಾನಿಗಳು ಅಭಿನಂದನೆ ತಿಳಿಸಿದ್ದಾರೆ. ಜೊತೆಗೆ ತಮ್ಮ ಮೆಚ್ಚಿನ ನಟನ ಸಾಧನೆ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. 'ಅತ್ಯುತ್ತಮ ನಟ ಪ್ರಶಸ್ತಿ ಗೆದ್ದಿದ್ದಕ್ಕಾಗಿ ನಮ್ಮಿಂದ ನಿಮಗೆ ಅನೇಕ ಅಭಿನಂದನೆಗಳು, ನಿಜವಾಗಿಯೂ ನೀವು ಉತ್ತಮರು ಸರ್, ನಿಮಗೆ ಹೃತ್ಪೂರ್ವಕವಾಗಿ ವಂದನೆ' ಎಂದು ಅಭಿಮಾನಿಯೋರ್ವರು ಕಾಮೆಂಟ್ ಮಾಡಿದ್ದಾರೆ. ಮತ್ತೋರ್ವ ಅಭಿಮಾನಿ ಪ್ರತಿಕ್ರಿಯಿಸಿ, 'ಅಭಿನಂದನೆಗಳು ಸರ್, ನಿಮಗೆ ಇಂತಹ ಹಲವಾರು ಪ್ರಶಸ್ತಿಗಳು ಬರುತ್ತಲೇ ಇವೆ, ಇನ್ನು ಮುಂದೆಯೂ ಬರಲಿ' ಎಂದು ತಿಳಿಸಿದ್ದಾರೆ.