ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಮೆಚ್ಚುಗೆ ಪಡೆದು, ಸಂಚಲನ ಮೂಡಿಸಿದ್ದ 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ಅಶ್ಲೀಲವಾಗಿದೆ ಎಂದು ಹೇಳಿಕೆ ನೀಡಿದ್ದ ಇಸ್ರೇಲ್ ಸಿನಿಮಾ ನಿರ್ಮಾಪಕ ನಡಾವ್ ಲಪಿಡ್ ಅವರ ವಿರುದ್ಧ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಅವರು ತೀವ್ರವಾಗಿ ಕಿಡಿಕಾರಿದ್ದಾರೆ.
ಸೋಮವಾರ (ನವೆಂಬರ್ 28) ಗೋವಾದಲ್ಲಿ ನಡೆದ 'ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ'ದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ್ದ ಲಪಿಡ್, 'ದಿ ಕಾಶ್ಮೀರ್ ಫೈಲ್ಸ್' ಅನ್ನು "ಪ್ರಚಾರ, ಅಸಭ್ಯ ಚಿತ್ರ" ಎಂದು ಕರೆದಿದ್ದರು. ಅಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಸ್ಪರ್ಧಾತ್ಮಕ ವಿಭಾಗದಲ್ಲಿ ಈ ಚಿತ್ರವನ್ನು ನೋಡಿ "ಆಘಾತಗೊಂಡಿದ್ದೇನೆ ಎಂದು ಹೇಳಿದ್ದರು.
ಲಪಿಡ್ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಬಾಲಿವುಡ್ ನಟ ಅನುಪಮ್ ಖೇರ್, ನಡಾವ್ ಲಪಿಡ್ ಅವರು ಚಿತ್ರವನ್ನು "ಪ್ರಚಾರ, ಅಸಭ್ಯ" ಎಂದು ಕರೆದಿರುವುದು "ನಾಚಿಕೆಗೇಡಿನ ಸಂಗತಿ" ಎಂದು ಹೇಳಿದ್ದಾರೆ. "ಹತ್ಯಾಕಾಂಡ ಸರಿಯಾಗಿರುವುದಾದರೆ, ಕಾಶ್ಮೀರಿ ಪಂಡಿತರ ನಿರ್ಗಮನವೂ ಸರಿಯಿದೆ. ಇದು ಪೂರ್ವ ಯೋಜಿತ ಎಂದು ತೋರುತ್ತದೆ. ಈ ಹೇಳಿಕೆ ಬಳಿಕ ಟೂಲ್ ಕಿಟ್ ಗ್ಯಾಂಗ್ ಸಕ್ರಿಯವಾಗಿದೆ. ಲಪಿಡ್ ಅವರು, ಹತ್ಯಾಕಾಂಡದಿಂದ ಬಳಲುತ್ತಿರುವ ಯಹೂದಿಗಳ ಸಮುದಾಯದಿಂದ ಬಂದಿದ್ದರೂ ಈ ರೀತಿಯ ಹೇಳಿಕೆ ನೀಡುವುದು ನಾಚಿಕೆಗೇಡಿನ ಸಂಗತಿ ಎಂದು ತಿಳಿಸಿದ್ದಾರೆ.