ಕೇಂದ್ರ ಸರ್ಕಾರ ಗುರುವಾರ ಸಂಜೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಿದೆ. 69ನೇ ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ಪೈಕಿ ಸೂಪರ್ ಹಿಟ್ ದಿ ಕಾಶ್ಮಿರ್ ಫೈಲ್ಸ್ ಸಿನಿಮಾ ರಾಷ್ಟ್ರೀಯ ಏಕೀಕರಣದ ಕುರಿತಾದ ಸಿನಿಮಾ ಎಂದು ಗುರುತಿಸಿಕೊಂಡು ಪ್ರತಿಷ್ಠಿತ ನರ್ಗೀಸ್ ದತ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಪ್ರಶಸ್ತಿ ಘೋಷಣೆಯಾದ ಬಳಿಕ ಹಿರಿಯ ನಟ ಅನುಪಮ್ ಖೇರ್ ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸಿದರು.
ಚಿತ್ರಕ್ಕೆ ಸಂಬಂಧಿಸಿದ ಕೆಲ ಫೋಟೋಗಳನ್ನು ಶೇರ್ ಮಾಡಿರುವ ಅವರು, ''ನಮ್ಮ ಸಿನಿಮಾ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದು, ಹೆಮ್ಮೆಯಾಗುತ್ತಿದೆ ಮತ್ತು ಅತ್ಯಂತ ಸಂತಸದ ಕ್ಷಣ. ರಾಷ್ಟ್ರೀಯ ಏಕೀಕರಣದ ಅತ್ಯುತ್ತಮ ಚಲನಚಿತ್ರಕ್ಕಾಗಿ ಪ್ರತಿಷ್ಠಿತ ನರ್ಗೀಸ್ ದತ್ ಪ್ರಶಸ್ತಿ ಗೆದ್ದಿರುವುದಕ್ಕೆ ಹೆಮ್ಮೆಯಿದೆ. ನಮ್ಮ ಚಿತ್ರಕ್ಕೆ ಪ್ರಶಸ್ತಿ ಬಂದಿರುವುದಕ್ಕೆ ನಟನಾಗಿ ಮಾತ್ರವಲ್ಲದೇ ಚಿತ್ರದ ಕಾರ್ಯಕಾರಿ ನಿರ್ಮಾಪಕನಾಗಿಯೂ ಬಹಳ ಸಂತೋಷವಾಗುತ್ತಿದೆ ಎಂದು ತಿಳಿಸಿದರು.
ಜೊತೆಗೆ, ನನ್ನ ನಟನೆಗಾಗಿ ಪ್ರಶಸ್ತಿ ಗೆಲ್ಲಲು ಸಹ ಇಷ್ಟಪಡುತ್ತೇನೆ. ನಮ್ಮ ಇಷ್ಟಾರ್ಥಗಳು ಈಡೇರಿದರೆ ಮುಂದೆ ಕೆಲಸ ಮಾಡಲು ಉತ್ಸಾಹ ಬರುತ್ತದೆ ಎಂದು ತಿಳಿಸಿದ ನಟ, ನ್ಯಾಷನಲ್ ಫಿಲ್ಮ್ ಅವಾರ್ಡ್ಸ್ ವಿಜೇತರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು ಎಂದಿದ್ದಾರೆ.