ಕರ್ನಾಟಕ

karnataka

ETV Bharat / entertainment

ಸಿನಿಪ್ರಿಯರಿಗೆ ಗುಡ್​ನ್ಯೂಸ್: ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ - Prabhas

ಸಲಾರ್​ ಬಳಿಕ ಪ್ರಶಾಂತ್ ನೀಲ್ ಮತ್ತು ಪ್ರಭಾಸ್ ಕಾಂಬಿನೇಶನ್​ನಲ್ಲಿ ಮತ್ತೊಂದು ಬಿಗ್​​ ಬಜೆಟ್​​ ಸಿನಿಮಾ ಮೂಡಿ ಬರಲಿದೆ.

Prashanth Neel Prabhas movie
ಪ್ರಶಾಂತ್ ನೀಲ್ ಪ್ರಭಾಸ್ ಸಿನಿಮಾ

By

Published : Apr 12, 2023, 6:44 PM IST

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅಭಿನಯದ ಮತ್ತು ಸ್ಯಾಂಡಲ್​ವುಡ್​ನ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಸಿನಿಮಾ ಶೂಟಿಂಗ್​ ಭರದಿಂದ ಸಾಗುತ್ತಿದೆ. ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನರ್ ಸಿನಿಮಾ ಆಗಿ ಮೂಡಿಬರಲಿದ್ದು, ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಸಿನಿಪ್ರಿಯರು ಈ ಚಿತ್ರಕ್ಕೆ ಸಾಕಷ್ಟು ಕಾತರರಾಗಿ ಕಾಯುತ್ತಿರುವ ಈ ಹೊತ್ತಿನಲ್ಲಿ ನಿರ್ಮಾಪಕ ದಿಲ್ ರಾಜು ಸ್ವಾರಸ್ಯಕರ ಸುದ್ದಿಯೊಂದನ್ನು ಬಹಿರಂಗಪಡಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಬಹುನಿರೀಕ್ಷತ 'ಸಲಾರ್' ನಂತರ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಶೀಘ್ರದಲ್ಲೇ ಮತ್ತೊಂದು ಚಿತ್ರವನ್ನು ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.

"ಶೀಘ್ರದಲ್ಲೇ ಪ್ರಭಾಸ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್​​ನಲ್ಲಿ ಪೌರಾಣಿಕ ಚಿತ್ರವೊಂದು ಮೂಡಿ ಬರಲಿದೆ. ಅದರ ಸ್ಕ್ರಿಪ್ಟ್ ಕೂಡ ರೆಡಿ ಆಗಿದೆ. ಆದರೆ ಸದ್ಯ ಇಬ್ಬರೂ 'ಸಲಾರ್' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಆ ನಂತರ ಪ್ರಶಾಂತ್ ನೀಲ್ ಅವರು ಜೂ. ಎನ್​ಟಿಆರ್ ಜೊತೆ ಸಿನಿಮಾ ಮಾಡಲಿದ್ದಾರೆ. ಬಳಿಕ ಪ್ರಭಾಸ್ ಸಿನಿಮಾ ಶುರುವಾಗಲಿದೆ. ಪ್ರಸ್ತುತ ಈ ಚಿತ್ರವು ಮಾತುಕತೆಯ ಹಂತದಲ್ಲಿದೆ ಎಂದು ಹೇಳಿದರು. ಈ ಸುದ್ದಿ ಕೇಳಿ ಪ್ರಶಾಂತ್​ ನೀಲ್​ ಮತ್ತು ಪ್ರಭಾಸ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಕನ್ನಡದ ಪ್ರಶಾಂತ್​ ನೀಲ್ ಸ್ಟಾರ್​ ನಟರಿಗೆ ಆ್ಯಕ್ಷನ್​ ಕಟ್​ ಹೇಳುತ್ತಿರುವುದು ಹೆಮ್ಮೆಯ ವಿಷಯ ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ, 'ಸಲಾರ್' ಚಿತ್ರದ ಟೀಸರ್‌ಗೆ ಸಂಬಂಧಿಸಿದ ಸುದ್ದಿಯೊಂದು ಹರಿದಾಡುತ್ತಿದೆ. ಈ ಟೀಸರ್ ಜೂನ್​​ನಲ್ಲಿ ಬಿಡುಗಡೆಯಾಗಲಿದೆ ಎಂಬುದು ಚಿತ್ರರಂಗದ ಮಾತು. ಅದಕ್ಕೆ ಸಂಬಂಧಿಸಿದ ಎಲ್ಲ ಕೆಲಸಗಳು ಈಗಾಗಲೇ ಮುಗಿದಿವೆ ಎನ್ನಲಾಗಿದೆ. ಪ್ರಭಾಸ್ ಅಭಿನಯದ 'ಆದಿಪುರುಷ್' ಸಿನಿಮಾ ಬಿಡುಗಡೆಯಾದ ಬೆನ್ನಲ್ಲೇ ಈ ಟೀಸರ್ ರಿಲಿಸ್​ ಆಗಲಿದೆ ಎನ್ನಲಾಗಿದೆ. ಅಲ್ಲದೇ ಚಿತ್ರದ ಕಾನ್ಸೆಪ್ಟ್ ಅನ್ನು ಟೀಸರ್​ನಲ್ಲೇ ತೋರಿಸಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆಯಾಗಿಲ್ಲ.

ಇದನ್ನೂ ಓದಿ:ರಾಜಕೀಯದಿಂದ ದೂರ ಉಳಿದು ಅಭಿಮಾನಿಗಳ ಆರಾಧ್ಯ ದೈವವಾದ ಮೇರುನಟ ರಾಜ್​​​ಕುಮಾರ್

ಸೂಪರ್​ ಸ್ಟಾರ್ ಪ್ರಭಾಸ್ ಸಿನಿಮಾಗಳ ವಿಚಾರ ಗಮನಿಸುವುದಾದರೆ, ಬಾಹುಬಲಿ 2 ರಿಲೀಸ್ ಆದ ನಂತರ 2022ರಲ್ಲಿ ರಾಧೆ ಶ್ಯಾಮ್ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಆ್ಯಕ್ಷನ್​ ಕಟ್​ ಹೇಳುತ್ತಿರುವ 'ಸಲಾರ್' ಚಿತ್ರದ ಶೂಟಿಂಗ್ ಮುಂದುವರಿದಿದೆ. ಈ ಚಿತ್ರದ ಜೊತೆಗೆ ನಾಗ್ ಅಶ್ವಿನ್ ಅವರ 'ಪ್ರಾಜೆಕ್ಟ್ ಕೆ' ಚಿತ್ರದ ಶೂಟಿಂಗ್​ನಲ್ಲಿಯೂ ತೊಡಗಿದ್ದಾರೆ. ಇದಲ್ಲದೇ ಟಾಲಿವುಡ್ ನಿರ್ದೇಶಕ ಮಾರುತಿ ನಿರ್ಮಾಣದ, ಬಾಲಿವುಡ್ ಖ್ಯಾತ ನಿರ್ದೇಶಕ ಓಂ ರಾವುತ್ ನಿರ್ದೇಶನದ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ರಾಮಾಯಣ ಆಧಾರಿತ ಆದಿಪುರುಷ್​ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದೆ. ಸೂಪರ್​ ಹಿಟ್ ಅರ್ಜುನ್ ರೆಡ್ಡಿ ಚಿತ್ರದ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ 'ಸ್ಪಿರಿಟ್' ಚಿತ್ರಕ್ಕೂ ಪ್ರಭಾಸ್ ಸಹಿ ಹಾಕಿದ್ದಾರೆ.

ಇದನ್ನೂ ಓದಿ:ನಂದಿನಿ ನಮ್ಮವಳಲ್ಲ 'ನನ್ನವಳು': ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್

ಜೂನ್​ 16ರಂದು 'ಆದಿಪುರುಷ್' ತೆರೆ ಕನ್ನಡ, ತೆಲುಗು, ಹಿಂದಿ, ಮಲೆಯಾಳಂ, ತಮಿಳು ಭಾಷೆಗಳಲ್ಲಿ ಕಾಣಲಿದ್ದು, ಸಿದ್ಧತೆ ನಡೆಯುತ್ತಿದೆ. ಓಂ ರಾವತ್​ ಆ್ಯಕ್ಷನ್​ ಕಟ್ ಹೇಳಿರುವ ಈ ಚಿತ್ರದಲ್ಲಿ ಪ್ರಭಾಸ್​ ರಾಮನ ಪಾತ್ರ, ಕೃತಿ ಸನೂನ್ ಸೀತೆ ಪಾತ್ರ​ ಮತ್ತು ಸನ್ನಿ ಸಿಂಗ್​ ಲಕ್ಷ್ಮಣನ ಪಾತ್ರ, ಸೈಫ್​ ಅಲಿ ಖಾನ್​ ರಾವಣನ ಪಾತ್ರದಲ್ಲಿ ನಟಿಸಿದ್ದಾರೆ.

ABOUT THE AUTHOR

...view details