ಸಿಂಪಲ್ಸ್ಟಾರ್ ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ ಚಾರ್ಲಿ 777 ಕನ್ನಡದ ಸಿನಿಮಾ ಬಹು ದೊಡ್ಡ ಸಕ್ಸಸ್ ಕಂಡಿತ್ತು. ಬಳಿಕ ಶ್ವಾನಗಳಿಗೆ ಹಾಗು ಶ್ವಾನದ ಕಥೆ ಆಧರಿಸಿರೋ ಚಿತ್ರಗಳು ಸಿನಿ ಪ್ರೇಮಿಗಳ ಮನಸ್ಸು ಕದಿಯುತ್ತಿವೆ. ಇದೀಗ ಅಂತಹದ್ದೇ ವಿಭಿನ್ನ ಕಥೆ ಹೊಂದಿರುವ 'ಯಾವ ಮೋಹನ ಮುರಳಿ ಕರೆಯಿತು' ಎಂಬ ಚಿತ್ರವೊಂದು ಬೆಳ್ಳಿ ತೆರೆ ಮೇಲೆ ಬರ್ತಾ ಇದೆ.
ಅಮೇರಿಕಾ ಅಮೇರಿಕಾ ಸಿನಿಮಾದಲ್ಲಿ ಕವಿ ಗೋಪಾಲಕೃಷ್ಣ ಅಡಿಗರು ಬರೆದಿರುವ "ಯಾವ ಮೋಹನ ಮುರಳಿ ಕರೆಯಿತು" ಎಂಬ ಹಾಡು ಬಹಳ ಜನಪ್ರಿಯ. ಈಗ ಇದೇ ಹಾಡಿನ ಮೊದಲ ಸಾಲು ಚಿತ್ರದ ಶೀರ್ಷಿಕೆಯಾಗಿರೋದು ವಿಶೇಷ. ಕೆಳದ ಎರಡು ದಿನಗಳಿಂದೆ ಚಿತ್ರದ ಟೀಸರ್ನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ. ಮ. ಹರೀಶ್ ಟೀಸರ್ ಬಿಡುಗಡೆ ಮಾಡಿ, ಚಿತ್ರಕ್ಕೆ ಶುಭ ಕೋರಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿಲ್ಪ ಶ್ರೀನಿವಾಸ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಈ ವೇಳೆ ಮೊದಲಿಗೆ ಚಿತ್ರದ ನಿರ್ದೇಶಕ ವಿಶ್ವಾಸ್ ಕೃಷ್ಣ ಮಾತನಾಡಿ, ಮನುಷ್ಯ ಹಾಗೂ ಶ್ವಾನದ ನಡುವಿನ ಪ್ರೀತಿಯ ಕುರಿತಾದ ಚಿತ್ರ ಇದಾಗಿದ್ದು, ಕನ್ನಡದಲ್ಲಿ ಶ್ವಾನದ ಕುರಿತಾದ ಚಿತ್ರಗಳು ಬಂದಿದೆಯಾದರೂ ಇದು ಸ್ವಲ್ಪ ಭಿನ್ನ. ಭರವಸೆಯ ಹುಡುಕಾಟದಲ್ಲಿರುವ ಅಂಗವಿಕಲ ಹುಡುಗಿಗೆ ಪ್ರೀತಿ ಅರಸಿ ಹೊರಟಿರುವಾಗ ಶ್ವಾನ ಸಿಗುತ್ತದೆ. ಇಬ್ಬರ ನಡುವೆ ಉತ್ತಮ ಬಾಂಧವ್ಯವಿರುತ್ತದೆ. ಆ ಸಮಯದಲ್ಲಿ ಇವರಿಬ್ಬರ ನಡುವೆ ಮತ್ತೊಬ್ಬ ವ್ಯಕ್ತಿ ಪ್ರವೇಶಿಸುತ್ತಾನೆ. ನಂತರ ಏನಾಗುತ್ತದೆ ಎಂಬುದೆ ಚಿತ್ರದ ಕಥೆ. ಈಗಾಗಲೇ ಚಿತ್ರೀಕರಣ ಮುಗಿದು ಬಿಡುಗಡೆಗೆ ಸಿದ್ದವಾಗಿದೆ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಸದ್ಯದಲ್ಲೇ ಟ್ರೇಲರ್ ಬರಲಿದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ ಖಂಡಿತಾ ಶ್ವಾನ ಪ್ರಿಯರಿಗೆ ಇಷ್ಟ ಆಗುತ್ತೆ ಎಂದರು.