ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರಿಗೆ ಇ ಮೇಲ್ ಮೂಲಕ ಬೆದರಿಕೆ ಪತ್ರ ಬಂದಿದ್ದು, ತನಿಖೆ ಚುರುಕುಗೊಂಡಿದೆ. ಅದಾದ ಕೆಲವೇ ದಿನಗಳ ನಂತರ ಮುಂಬೈ ಪೊಲೀಸರಿಗೆ ಸೋಮವಾರ ರಾಜಸ್ಥಾನದ ವ್ಯಕ್ತಿಯಿಂದ ಕರೆ ಬಂದಿದ್ದು, ಈ ತಿಂಗಳ ಕೊನೆಯಲ್ಲಿ ಸಲ್ಮಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.
ಏಪ್ರಿಲ್ 30 ರಂದು ಸಲ್ಮಾನ್ ಖಾನ್ರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಲಾಗಿದೆ. ಆ ವ್ಯಕ್ತಿ ತನ್ನನ್ನು ರಾಜಸ್ಥಾನದ ಜೋಧ್‌ಪುರದ ರೋಕಿ ಭಾಯ್ ಎಂದು ಪರಿಚಯಿಸಿಕೊಂಡಿದ್ದಾನೆ. "ನಿನ್ನೆ ಪೊಲೀಸ್ ಕಂಟ್ರೋಲ್ ರೂಮ್‌ಗೆ ಬಂದ ಕರೆಯಲ್ಲಿ, ರಾಜಸ್ಥಾನದ ಜೋಧಪುರದ ರೋಕಿ ಭಾಯ್ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬ ಏಪ್ರಿಲ್ 30ರಂದು ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ" ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಮಾರ್ಚ್ ತಿಂಗಳಲ್ಲಿ ಸಲ್ಮಾನ್ ಖಾನ್ ಅವರಿಗೆ ಇ ಮೇಲ್ ಮೂಲಕ ಕೊಲೆ ಬೆದರಿಕೆ ಬಂದಿತ್ತು. ಮುಂಬೈ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದರು. ನಟನ ಆಪ್ತರೊಬ್ಬರಿಗೆ ಕಳುಹಿಸಲಾದ ಇ ಮೇಲ್ನಲ್ಲಿ, ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಇತ್ತೀಚಿನ ಸಂದರ್ಶನವನ್ನು ಉಲ್ಲೇಖಿಸಿ, "ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದು ನನ್ನ ಜೀವನದ ಗುರಿಯಾಗಿದೆ" ಎಂದು ಸಂದೇಶ ಕಳುಹಿಸಿದ್ದ.
ಬಾಂದ್ರಾ ಪೊಲೀಸರು ಕಾರ್ಯಾಚರಣೆಗೆ ಇಳಿದಿದ್ದು, ರಾಜಸ್ಥಾನ ಪೊಲೀಸರೊಂದಿಗೆ ಕೈಜೋಡಿಸಿದ್ದಾರೆ. ರಾಜಸ್ಥಾನದ ಜೋಧ್‌ಪುರ ಜಿಲ್ಲೆಯ ಲುನಿ ನಿವಾಸಿ, ಆರೋಪಿ ಧಾಕಡ್ ರಾಮ್ ಎಂಬಾತನನ್ನು ಮಾರ್ಚ್ 26ರಂದು ಅರೆಸ್ಟ್ ಮಾಡಿ ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ಈ ಪ್ರಕರಣದ ತನಿಖೆಯೂ ನಡೆಯುತ್ತಿದ್ದು, ಬಾಂದ್ರಾ ಪಶ್ಚಿಮದಲ್ಲಿರುವ ಸಲ್ಮಾನ್ ಅವರ ಮನೆಯ ಹೊರಗೆ ಪೊಲೀಸರು ಭದ್ರತೆಯನ್ನು ಹೆಚ್ಚಿಸಿದ್ದರು. ಈ ಪ್ರಕರಣದ ಜೊತೆ ಹೊಸದಾಗಿ ಬಂದಿರುವ ಕೊಲೆ ಬೆದರಿಕೆ ಕೇಸ್ನ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.