ವಿಭಿನ್ನ ಶೈಲಿಯ ಹಾರರ್, ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ 'ಮಾಯಾನಗರಿ'. ಚಿತ್ರೀಕರಣ ಮುಗಿಸಿ ಬಿಡುಗಡೆ ಸಜ್ಜಾಗಿರುವ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಎಲ್ಲೆಡೆ ಸದ್ದು ಮಾಡುತ್ತಿದೆ. ಅನೀಶ್ ತೇಜೇಶ್ವರ್ ನಟನೆಯ 'ಮಾಯಾನಗರಿ' ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಂಕರ್ ಆರಾಧ್ಯ ನಿರ್ದೇಶನದ ಈ ಚಿತ್ರ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ. ಸಿನಿಮಾದಲ್ಲಿ ಅನೀಶ್ ತೇಜೇಶ್ವರ್, ಶ್ರಾವ್ಯ ರಾವ್ ಹಾಗೂ ತೇಜು ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ.
ಶೂಟಿಂಗ್ ವೇಳೆ ಸಾಕಷ್ಟು ಪರಿಶ್ರಮ ಹಾಕಿರುವ ಚಿತ್ರತಂಡ, ಹಲವಾರು ರಿಸ್ಕಿ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದೆ. ಈ ಕುರಿತು ಮಾತನಾಡಿರುವ ನಿರ್ದೇಶಕ ಶಂಕರ್ ಆರಾಧ್ಯ, 'ಈ ಚಿತ್ರದಲ್ಲಿ ಅನೀಶ್ ಅವರನ್ನು ಬೇರೆ ಬೇರೆ ಶೇಡ್ಗಳಲ್ಲಿ ತೋರಿಸಿದ್ದೇನೆ. ಕಥೆಗೆ ಅನುಗುಣವಾಗಿ ಸಾಕಷ್ಟು ಲೊಕೇಶನ್ಗಳಲ್ಲಿ ಶೂಟ್ ಮಾಡಲಾಗಿದೆ. ಟೆಕ್ನಿಕಲ್ ಆಗಿಯೂ ಸಿನಿಮಾ ತುಂಬಾ ಅದ್ಧೂರಿಯಾಗಿದೆ. ಕ್ಲೈಮ್ಯಾಕ್ಸ್ ಸನ್ನಿವೇಶ ನಿಜಕ್ಕೂ ಸವಾಲಿನ ಕೆಲಸವಾಗಿತ್ತು' ಎಂದಿದ್ದಾರೆ.
ಮಾತು ಮುಂದುವರಿಸುವ ಶಂಕರ್, 'ಜೋಗ್ ಫಾಲ್ಸ್ನಲ್ಲಿ ಶೂಟಿಂಗ್ ನಡೆಸಲು ಸುಮಾರು ಎರಡು ವಾರಗಳ ಕಾಲ ತಯಾರಿ ನಡೆಸಿದ್ದೇವೆ. ಈವರೆಗೂ ಯಾರು ಆ ರೀತಿ ಜೋಗ್ ತೋರಿಸಿಲ್ಲ. ಅದನ್ನು ಸಿನಿಮಾ ನೋಡಿಯೇ ಫೀಲ್ ಮಾಡಬೇಕು. ಅದೇ ರೀತಿ ಶೃಂಗೇರಿ, ಚಿಕ್ಕಮಗಳೂರು, ಹೊನ್ನಾವರ, ಮಾಗಡಿ, ತುಮಕೂರು ಮತ್ತು ಬೆಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ತಾಂತ್ರಿಕವಾಗಿಯೂ ಸಿನಿಮಾದಲ್ಲಿ ವಿಶೇಷವಿದೆ. ಮಾಸ್ ಮಾದ, ವಿಕ್ರಮ್ ಮೋರ್ ಫೈಟ್ ಕಂಪೋಸ್ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತಕ್ಕೆ ಯೋಗರಾಜ್ ಭಟ್, ಹರೀಶ್ ಶೃಂಗ, ಶಿವನಂಜೇ ಗೌಡ, ಸುದರ್ಶನ್ ಸಾಹಿತ್ಯ ಬರೆದಿದ್ದಾರೆ. ದುಮಾರಿ ಕ್ಯಾಮೆರಾ ತರಿಸಿ ಶೂಟ್ ಮಾಡಿದ್ದೇವೆ" ಎಂದು ತಿಳಿಸಿದರು.
ಇನ್ನು ಮಾಯಾನಗರಿ ಚಿತ್ರದಲ್ಲಿ ಅನೀಶ್, ಶ್ರಾವ್ಯ, ತೇಜು ಅಲ್ಲದೇ ಶರತ್ ಲೋಹಿತಾಶ್ವ, ಅವಿನಾಶ್, ಸುಚೇಂದ್ರ ಪ್ರಸಾದ್, ಎಡಕಲ್ಲು ಗುಡ್ಡದ ಚಂದ್ರಶೇಖರ್, ಚಿಕ್ಕಣ್ಣ, ಗಿರಿ ದಿನೇಶ್ ಹಾಗೂ ನಿಹಾರಿಕಾ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಹಲವಾರು ವಿಶೇಷತೆಗಳಿದ್ದು, ಅವುಗಳನ್ನು ಹಂತ ಹಂತವಾಗಿ ಪರಿಚಯಿಸುವ ಆಲೋಚನೆ ಶಂಕರ್ ಅವರಿಗಿದೆ. ಸ್ಯಾಂಡಲ್ವುಡ್ ಪಿಕ್ಚರ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ಶ್ವೇತಾ ಶಂಕರ್ ಸಹ ನಿರ್ಮಾಣವಿದೆ. ತಾಂತ್ರಿಕವಾಗಿ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ವಿಕ್ರಮ್ ಮೋರ್ ಫೈಟ್ ಕಂಪೋಸ್, ಮದನ್, ಹರಿಣಿ ಮತ್ತು ಮುರಳಿ ನೃತ್ಯ ನಿರ್ದೇಶನ, ವಿಜಯ್ ಎಂ ಸಂಕಲನ, ಶ್ರೀನಿವಾಸ್ ಕ್ಯಾಮರಾ ವರ್ಕ್ ಇದೆ.
ಇದನ್ನೂ ಓದಿ:ಅನೀಶ್ ತೇಜೇಶ್ವರ್ ನಟನೆಯ 'ಮಾಯಾನಗರಿ' ಚಿತ್ರದ ಟ್ರೇಲರ್ ಬಿಡುಗಡೆ