ಬಾಲಿವುಡ್ ಸೂಪರ್ ಸ್ಟಾರ್ ರಣ್ಬೀರ್ ಕಪೂರ್ ಮುಖ್ಯಭೂಮಿಕೆಯ 'ಅನಿಮಲ್' ಭಾರತೀಯ ಚಿತ್ರಮಂದಿರಗಳಲ್ಲಿ ಮಾತ್ರವಲ್ಲದೇ ಸಾಗರೋತ್ತರ ಪ್ರದೇಶಗಳಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.
ಜಾಗತಿಕ ಬಾಕ್ಸ್ ಆಫೀಸ್ ಕಲೆಕ್ಷನ್:ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಆ್ಯಕ್ಷನ್ ಸಿನಿಮಾ ಮಂಗಳವಾರದವರೆಗೆ ಅಂದರೆ ಕೇವಲ ಐದು ದಿನಗಳಲ್ಲಿ 481 ಕೋಟಿ ರೂ. ಕಲೆಕ್ಷನ್ ಮಾಡುವಲ್ಲಿ ಯಶಸ್ಸು ಕಂಡಿದೆ. ಸಿನಿಮಾ ಜಾಗತಿಕವಾಗಿ 500 ಕೋಟಿ ರೂಪಾಯಿ ಗಡಿ ಸಮೀಪಿಸಿದೆ. ಇಂದಿನ ಕಲೆಕ್ಷನ್ ಮಾಹಿತಿ ನಾಳೆ ಹೊರಬೀಳಲಿದ್ದು, 500 ಕೋಟಿ ರೂ.ನ ಕ್ಲಬ್ ಸೇರುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ.
ಬಾಕ್ಸ್ ಆಫೀಸ್ ಕಲೆಕ್ಷನ್ ದಿನನಿತ್ಯದ ಅಂಕಿಅಂಶ:ಟಿ-ಸಿರೀಸ್ ಅನಿಮಲ್ ಬಾಕ್ಸ್ ಆಫೀಸ್ ಮಾಹಿತಿಯನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದೆ. ಅನಿಮಲ್ ಪೋಸ್ಟರ್ ಹಂಚಿಕೊಂಡು ವಿಶ್ವದಾದ್ಯಂತ 481 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ತಿಳಿಸಿದೆ. ಅನಿಮಲ್ ಹಂಟ್ ಬಿಗಿನ್ಸ್ (#AnimalHuntBegins) ಎಂದು ಶೀರ್ಷಿಕೆ ಕೊಟ್ಟಿದೆ. ಅನಿಮಲ್ ತೆರೆಕಂಡ ಮೊದಲ ದಿನ 116 ಕೋಟಿ ರೂ., ಮೊದಲ ಶನಿವಾರ 120 ಕೋಟಿ ರೂ., ಮೊದಲ ಭಾನುವಾರ 120 ಕೋಟಿ ರೂ., ಮೊದಲ ಸೋಮವಾರ 69 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಈಗಾಗಲೇ ಸಿನಿಪಂಡಿತರು ಮಾಹಿತಿ ಒದಗಿಸಿದ್ದಾರೆ.
ಐದು ದಿನಗಳಲ್ಲಿ ಸಿನಿಮಾ 481 ಕೋಟಿ ರೂ. ನ ವ್ಯವಹಾರ ನಡೆಸಿದೆ. ಆರು ದಿನಗಳಲ್ಲಿ ಜಾಗತಿಕವಾಗಿ ಒಟ್ಟು 500 ರೂ. ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಐದನೇ ದಿನ ಸಿನಿಮಾ ಸರಿಸುಮಾರು 38.25 ಕೋಟಿ ರೂಪಾಯಿಗಳನ್ನು ಗಳಿಸಿದೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ.
ಇದನ್ನೂ ಓದಿ:'ಕಾಫಿ ವಿತ್ ಕರಣ್'ನಲ್ಲಿ ಕಿಯಾರಾ ಅಡ್ವಾಣಿ, ವಿಕ್ಕಿ ಕೌಶಲ್; ಆಕರ್ಷಕ ಫೋಟೋಗಳು ಶೇರ್
ಐದನೇ ದಿನದ ಕಲೆಕ್ಷನ್ ಮೂಲಕ ಅನಿಮಲ್ ಸಿನಿಮಾ ರಣ್ಬೀರ್ ಕಪೂರ್ ಅವರ ಎರಡನೇ ಅತಿದೊಡ್ಡ ಹಿಟ್ ಸಿನಿಮಾವಾಗಿ ಹೊರಹೊಮ್ಮಿದೆ. ಜಾಗತಿಕ ಮತ್ತು ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿರುವ ಸಿನಿಮಾವಿದು. ಅನಿಮಲ್ ರಣ್ಬೀರ್ ಅವರ ಬ್ಲಾಕ್‌ಬಸ್ಟರ್ 'ಬ್ರಹ್ಮಾಸ್ತ್ರ' ದಾಖಲೆಗಳನ್ನು ಮೀರಿಸಿದೆ. ಮೊದಲ ಸ್ಥಾನದಲ್ಲಿರುವ ಹಿಟ್ ಸಿನಿಮಾ 'ಸಂಜು'ವಿನ ದೇಶೀಯ ಗಲ್ಲಾಪೆಟ್ಟಿಗೆಯ ಗಳಿಕೆ 342 ಕೋಟಿ ರೂ. ವಿಶ್ವದಾದ್ಯಂತ ಸುಮಾರು 590 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಮುಂದಿನ ದಿನಗಳಲ್ಲಿ, ಅನಿಮಲ್ ಈ ದಾಖಲೆಗಳನ್ನು ಮೀರಿಸಲಿದೆ ಎಂಬ ವಿಶ್ವಾಸ ಅಭಿಮಾನಿಗಳದ್ದು. ಅಲ್ಲದೇ ಈ ವರ್ಷದ ಟಾಪ್ ಫೈವ್ ಬ್ಲಾಕ್‌ಬಸ್ಟರ್ ಸಿನಿಮಾಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಿದೆ. ರಣ್ಬೀರ್ ಮಾತ್ರದಲ್ಲದೇ ರಶ್ಮಿಕಾ ಮಂದಣ್ಣ ವೃತ್ತಿಜೀವನದಲ್ಲೂ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರ ಇದಾಗಿದೆ.
ಇದನ್ನೂ ಓದಿ:ಪ್ರತಿಷ್ಠಿತ 'ಅಕಾಡೆಮಿ ಮ್ಯೂಸಿಯಂ ಗಾಲಾ' ಈವೆಂಟ್ ಮುಗಿಸಿ ಬಂದ ದೀಪಿಕಾ ಪಡುಕೋಣೆ
ಚಿತ್ರದಲ್ಲಿ ಬಾಬಿ ಡಿಯೋಲ್, ಅನಿಲ್ ಕಪೂರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಟಿ-ಸೀರೀಸ್ ಫಿಲ್ಮ್ಸ್, ಭದ್ರಕಾಳಿ ಪಿಕ್ಚರ್ಸ್ ಮತ್ತು ಸಿನಿ1 ಸ್ಟುಡಿಯೋಸ್ ಬ್ಯಾನರ್‌ಗಳ ಅಡಿ ಭೂಷಣ್ ಕುಮಾರ್, ಕ್ರಿಶನ್ ಕುಮಾರ್, ಪ್ರಣಯ್ ರೆಡ್ಡಿ ವಂಗಾ ಮತ್ತು ಮುರಾದ್ ಖೇತಾನಿ ಅವರು ನಿರ್ಮಿಸಿದ್ದಾರೆ. ಡಿಸೆಂಬರ್ 1 ರಂದು ವಿಕ್ಕಿ ಕೌಶಲ್ ಅವರ ಸ್ಯಾಮ್ ಬಹದ್ದೂರ್ ಚಿತ್ರದ ಜೊತೆಗೆ ಅನಿಮಲ್ ಬಿಡುಗಡೆ ಆಗಿದೆ.