ಕಬೀರ್ ಸಿಂಗ್ ಮತ್ತು ಅರ್ಜುನ್ ರೆಡ್ಡಿ ಸಿನಿಮಾಗಳಿಗೆ ಹೆಸರುವಾಸಿಯಾದ ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್, ಮೇಘನಾ ಗುಲ್ಜಾರ್ ನಿರ್ದೇಶನದ ಸ್ಯಾಮ್ ಬಹದ್ದೂರ್ ಸಿನಿಮಾ ನಾಳೆ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಎರಡೂ ಕೂಡ ಈ ಸಾಲಿನ ಬಹುನಿರೀಕ್ಷಿತ ಸಿನಿಮಾಗಳಾಗಿದ್ದು, ಬಾಕ್ಸ್ ಆಫೀಸ್ ಪೈಪೋಟಿ ಪಕ್ಕಾ ಅಂತಿದ್ದಾರೆ ಸಿನಿ ಪಂಡಿತರು. ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣಲಿದೆ. ಆದರೆ ಅನಿಮಲ್ ಸಿನಿಮಾ ಮುನ್ನಡೆ ಸಾಧಿಸಲಿದೆ ಎಂದು ಆರಂಭಿಕ ಅಂದಾಜುಗಳು ಸೂಚಿಸಿವೆ.
ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕಿಂಗ್ ಪ್ರಕ್ರಿಯೆ ಜೋರಾಗೇ ನಡೆದಿದೆ. ರಣ್ಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಅನಿಮಲ್ ಸಿನಿಮಾದ ಟಿಕೆಟ್‌ಗಳು ಶರವೇಗದಲ್ಲಿ ಸೇಲ್ ಆಗುತ್ತಿವೆ. ಸಿನಿಮಾ ಹೆಚ್ಚಿನ ಲಾಭ ಪಡೆಯಲಿದೆ. ಹಿಂದಿ ಭಾಷೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು ಆನ್ಲೈನ್ನಲ್ಲಿ ಸರಿಸುಮಾರು 17.1 ಕೋಟಿ ರೂ.ಗೂ ಹೆಚ್ಚಿನ ಮೌಲ್ಯದ ಟಿಕೆಟ್‌ಗಳು ಸೇಲ್ ಆಗಿವೆ (ಇಂದು ಬೆಳಗಿನ ಮಾಹಿತಿ. ಮುಂಗಡ ಟಿಕೆಟ್ ಖರೀದಿ ಪ್ರಕ್ರಿಯೆ ಮುಂದುವರಿದಿದೆ). ಮತ್ತೊಂದೆಡೆ ಸ್ಯಾಮ್ ಬಹದ್ದೂರ್ ಸರಿಸುಮಾರು 1.81 ಕೋಟಿ ರೂ.ನ ವ್ಯವಹಾರ ನಡೆಸಿದೆ. ಮೊದಲ ದಿನ ಸಿನಿಮಾ ವೀಕ್ಷಿಸಲು 57,888ಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ.
ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಸಿನಿಮಾ 7,45,992ಕ್ಕೂ ಹೆಚ್ಚು ಟಿಕೆಟ್‌ಗಳನ್ನು ಮಾರಾಟ ಮಾಡಿದೆ. 19.7 ಕೋಟಿ ರೂ.ಗೂ ಹೆಚ್ಚು ವ್ಯವಹಾರ ನಡೆದಿದೆ. ಮೇಲೆ ತಿಳಿಸಿರುವ ಅಂಕಿ - ಅಂಶ ಕೇವಲ ಮೊದಲ ದಿನಕ್ಕೆ ಸಂಬಂಧಿಸಿದ್ದಾಗಿದೆ. ಮಾರಾಟವಾದ ಒಟ್ಟು ಟಿಕೆಟ್‌ಗಳ ಪೈಕಿ 5,75,197 ಟಿಕೆಟ್ಸ್ ಹಿಂದಿ ಭಾಷೆಯದ್ದಾದರೆ, 1,63,361 ಟಿಕೆಟ್ಸ್ ತೆಲುಗು ಭಾಷೆಯ ಶೋಗಳಿಗೆ ಎಂದು ಸ್ಯಾಕ್ನಿಲ್ಕ್ ವರದಿ ತಿಳಿಸಿದೆ. ಅನಿಮಲ್ ಸಿನಿಮಾ ದೆಹಲಿಯಲ್ಲಿ 4.07 ಕೋಟಿ ರೂ., ತೆಲಂಗಾಣದಲ್ಲಿ 4.14 ಕೋಟಿ ರೂ., ಮಹಾರಾಷ್ಟ್ರದಲ್ಲಿ 3.29 ಕೋಟಿ ರೂ., ಕರ್ನಾಟಕದಲ್ಲಿ 2.23 ಕೋಟಿ ರೂ., ಗುಜರಾತ್ನಲ್ಲಿ 1.49 ಕೋಟಿ ರೂ., ಆಂಧ್ರಪ್ರದೇಶದಲ್ಲಿ 2.18 ಕೋಟಿ ರೂ., ಮತ್ತು ಉತ್ತರ ಪ್ರದೇಶ (ರೂ. 1.34 ಕೋಟಿ), ಇತರ ರಾಜ್ಯಗಳಲ್ಲಿ 1 ಕೋಟಿ ರೂ.ಗಿಂತ ಕಡಿಮೆ ವ್ಯವಹಾರ ನಡೆಸಿದೆ. ಈ ಸಂಖ್ಯೆ ಕ್ಷಣ ಕ್ಷಣಕ್ಕೂ ಏರುತ್ತಿದೆ.