ಬಾಲಿವುಡ್ನ ಬಹುನಿರೀಕ್ಷಿತ ಸಿನಿಮಾಗಳು ಬಿಡುಗಡೆಗೆ ಸಜ್ಜಾಗಿವೆ. ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ದೂರ್, ರಣ್ಬೀರ್ ಕಪೂರ್ ಅಭಿನಯದ ಅನಿಮಲ್ ಸಿನಿಮಾಗಳೆರಡೂ ಡಿಸೆಂಬರ್ 1ರಂದು ತೆರೆಕಾಣಲಿದ್ದು, ಬಾಕ್ಸ್ ಆಫೀಸ್ ಪೈಪೋಟಿ ಖಚಿತ. ಕೆಲ ದಿನಗಳ ಹಿಂದಷ್ಟೇ ಬಾಲಿವುಡ್ನಲ್ಲಿ ಇದೇ ಪರಿಸ್ಥಿತಿ ಉದ್ಭವಿಸಿತ್ತು.
ಸನ್ನಿ ಡಿಯೋಲ್ ಮುಖ್ಯಭೂಮಿಕೆಯ ಬಹುನಿರೀಕ್ಷಿತ ಗದರ್ 2 ಮತ್ತು ಅಕ್ಷಯ್ ಕುಮಾರ್ ಅಭಿನಯದ ಓ ಮೈ ಗಾಡ್ 2 ಸಿನಿಮಾ ಆಗಸ್ಟ್ 11 ರಂದು ಏಕಕಾಲದಲ್ಲಿ ಬಿಡುಗಡೆ ಆಯಿತು. ಎರಡೂ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಒಂದೇ ದಿನ ತೆರೆಕಂಡು ಅದ್ಭುತ ಪ್ರದರ್ಶನ ನೀಡಿತು. ಎರಡೂ ಚಿತ್ರಗಳ ಗಳಿಕೆ ಉತ್ತಮವಾಗೇ ಇದೆ. ಆದ್ರೆ ಗದರ್ 2 ಕಲೆಕ್ಷನ್ ಅಂಕಿ ಅಂಶ ಎಲ್ಲರ ಹುಬ್ಬೇರಿಸಿತ್ತು. ಇದೀಗ ಸ್ಯಾಮ್ ಬಹದ್ದೂರ್ ಮತ್ತು ಅನಿಮಲ್ ಸಿನಿಮಾಗಳ ಬಾಕ್ಸ್ ಆಫೀಸ್ ಘರ್ಷಣೆ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಗದರ್ 2 ಮತ್ತು ಓ ಮೈ ಗಾಡ್ 2 ಸಿನಿಮಾಗಳ ನಡುವಿನ ಘರ್ಷಣೆ ಬಾಲಿವುಡ್ನಲ್ಲಿ ದಾಖಲೆಗಳನ್ನು ನಿರ್ಮಿಸಿತ್ತು. ಶಾರುಖ್ ಖಾನ್ ಅವರ ಜವಾನ್ ಬಳಿಕ ಅತಿ ಹೆಚ್ಚು ಗಳಿಕೆ ಮಾಡಿದ ಹಿಂದಿ ಸಿನಿಮಾವಾಗಿ ಗದರ್ 2 ಹೊರಹೊಮ್ಮಿತ್ತು. ಬಿಗ್ ಫೈಟ್ ಹೊರತಾಗಿಯೂ, ಅಕ್ಷಯ್ ಕುಮಾರ್ ನಟನೆಯ ಓಎಂಜಿ 2 ಕೂಡ ಉತ್ತಮ ಪ್ರದರ್ಶನ ಕಂಡು ಹಿಟ್ ಆಗಿತ್ತು.
ರಣ್ಬೀರ್ ಕಪೂರ್ ಮುಖ್ಯಭೂಮಿಕೆಯ ಅನಿಮಲ್ ಮತ್ತು ವಿಕ್ಕಿ ಕೌಶಲ್ ನಟನೆಯ ಸ್ಯಾಮ್ ಬಹದ್ದೂರ್ ಸೇರಿ ಎರಡು ಬಹುನಿರೀಕ್ಷಿತ ಬಾಲಿವುಡ್ ಸಿನಿಮಾಗಳು ಒಂದೇ ದಿನ ತೆರೆಗಪ್ಪಳಿಸುವ ಮೂಲಕ ಬಾಲಿವುಡ್ನಲ್ಲಿ ಮತ್ತೊಮ್ಮೆ ಅದೇ ಸನ್ನಿವೇಶ ಮರುಕಳಿಸಲಿದೆ. ಹೌದು, ಇವೆರಡೂ ಚಿತ್ರಗಳು ಡಿಸೆಂಬರ್ 1 ರಂದು ಬಿಡುಗಡೆಯಾಗಲಿದೆ. ಆರಂಭಿಕ ಅಂದಾಜಿನ ಪ್ರಕಾರ, ಎರಡೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣಲಿವೆ.