2023ರ ಬಹು ನಿರೀಕ್ಷಿತ ಚಿತ್ರಗಳಲ್ಲೊಂದಾದ 'ಅನಿಮಲ್' ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್‌ನ ಮೊದಲ ದಿನ ಚಿತ್ರ ತೆರೆಗಪ್ಪಳಿಸಲಿದೆ. ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಚಿತ್ರದಲ್ಲಿ ರಣ್ಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತ್ರಿಪ್ತಿ ಡಿಮ್ರಿ ನಟಿಸಿದ್ದಾರೆ. ಅನಿಮಲ್ ಬಿಡುಗಡೆ ದಿನಾಂಕ ಹತ್ತಿರ ಬರುತ್ತಿದ್ದಂತೆ ಚಿತ್ರ ತಂಡದಿಂದ ಬಿರುಸಿನ ಪ್ರಚಾರ ನಡೆಯುತ್ತಿದೆ.
ಅರ್ಜನ್ ವೈಲಿ ಸಾಂಗ್ ರಿಲೀಸ್:ದುಬೈನ ಐಕಾನಿಕ್ ಕಟ್ಟಡ ಬುರ್ಜ್ ಖಲೀಫಾದಲ್ಲಿ ಅನಿಮಲ್ನ 60 ಸೆಕೆಂಡುಗಳ ಸ್ಪೆಷಲ್ ವಿಡಿಯೋ ಅನಾವರಣಗೊಳಿಸುವ ಮೂಲಕ ಗಮನ ಸೆಳೆದಿರುವ ಚಿತ್ರತಂಡ ಇಂದು ಚಿತ್ರದ ಹೊಸ ಹಾಡನ್ನು ಬಿಡುಗಡೆಗೊಳಿಸಿದೆ. ಈಗಾಗಲೇ ಅಭಿಮಾನಿಗಳಲ್ಲಿ ಸಿನಿಮಾ ಕುತೂಹಲ ಮೂಡಿಸಿದೆ. ಚಿತ್ರ ತಯಾರಕರು ಈಗಾಗಲೇ ಪಾಪಾ ಮೇರಿ ಜಾನ್, ಹುವಾ ಮೈನ್ ಮತ್ತು ಸತ್ರಂಗ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ. ಇಂದು (ನವೆಂಬರ್ 18) ಅರ್ಜನ್ ವೈಲಿ (ArjanVailly) ಎಂಬ ಮತ್ತೊಂದು ಹಾಡು ಅನಾವರಣಗೊಳಿಸಿದ್ದಾರೆ.
ಅನಿಮಲ್ ಚಿತ್ರದ ಹೊಸ ಆಡಿಯೋ ಟ್ರ್ಯಾಕ್ ಅರ್ಜನ್ ವೈಲಿ ಸಖತ್ ಬೀಟ್‌ಗಳಿಂದ ಕೇಳುಗರ ಗಮನ ಸೆಳೆದಿದೆ. ಮನನ್ ಭಾರದ್ವಾಜ್ ಮತ್ತು ಭೂಪಿಂದರ್ ಬಬ್ಬಲ್ ಅವರಂತಹ ಪ್ರತಿಭಾವಂತ ಕಲಾವಿದರ ಶ್ರಮದ ಫಲವೇ ಅರ್ಜನ್ ವೈಲಿ. ಮನನ್ ಭಾರದ್ವಾಜ್ ಅವರು ನಿರ್ಮಾಪಕರ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ. ಚಿತ್ರದ ಅಫೀಶಿಯಲ್ ಮ್ಯೂಸಿಕ್ ಪಾರ್ಟ್ನರ್ ಟಿ-ಸಿರೀಸ್ ಈ ಹಾಡನ್ನು ಪ್ರಚಾರ ಮಾಡುತ್ತಿದೆ. ಇನ್ಸ್ಟಾದಲ್ಲಿ ಪೋಸ್ಟ್ ಮಾಡಿರುವ ಟಿ-ಸಿರೀಸ್, ''ನೀವು ಕೇಳಿಕೊಂಡ್ರಿ, ನಮಗೆ ಕೇಳಿಸಿತು, ಅರ್ಜನ್ ವೈಲಿ ಹಾಡು ಅನಾವರಣ'' ಎಂದು ಬರೆದಿದ್ದಾರೆ. ಹಾಡಿನಲ್ಲಿ ನಾಯಕ ನಟ ರಣ್ಬೀರ್ ಕಪೂರ್ ರಕ್ತಸಿಕ್ತ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.